ಬಸವಕಲ್ಯಾಣ: ಸ್ವಸ್ಥ ಮಾನವ ಸಂಪನ್ಮೂಲ ದೇಶದ ಅಭ್ಯುದಯಕ್ಕೆ ಪೂರಕ ವ್ಯವಸ್ಥೆ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.
ಹಾರಕೂಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಮತ್ತು ವಿಶ್ವ ಜನಸಂಖ್ಯೆ ದಿನ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿದ ಅವರು, ಸಮಾಜದಲ್ಲಿ ಪರಿಪೂರ್ಣ ಆರೋಗ್ಯದ ಸ್ಥಿರತೆ ಕಾಪಾಡುವಲ್ಲಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ಔಷಧ ವಲಯದ ಪಾತ್ರ ಮುಖ್ಯವಾಗಿದೆ. ವೈದ್ಯ ಸಮೂಹಕ್ಕೆ ಕೃತಜ್ಞತೆ ಹೇಳುವ ದಿನವೇ ಡಾಕ್ಟರ್ಸ್ ಡೇ ಎಂದರು.
ದೇಶದ ಭೌಗೋಳಿಕ ವಿನ್ಯಾಸ ಹಾಗೂ ಅಲ್ಲಿನ ಸಂಪನ್ಮೂಲಗಳಿಗೆ ತಕ್ಕಂತೆ ಜನಸಂಖ್ಯೆ ಇದ್ದರೆ ಸರ್ಕಾರದ ಯೋಜನೆಗಳು ಫಲಪ್ರದವಾಗಲು ಸಾಧ್ಯ. ಅತಿಯಾದ ಇಲ್ಲವೆ ತೀರ ವಿರಾಳ ಜನಸಂಖ್ಯೆ ಅಭಿವೃದ್ಧಿಗೆ ಮಾರಕವಾಗಲಿದೆ. ಹೀಗಾಗಿ ಪ್ರತಿ ನಾಗರಿಕ ಗುರುತರವಾಗಿ ವರ್ತಿಸುವುದು ಅನಿವಾರ್ಯ ಎಂದು ಹೇಳಿದರು.
ಮುಖಂಡ ಮೇಘರಾಜ ನಾಗರಾಳೆ ಪ್ರಾಸ್ತಾವಿಕ ಮಾತನಾಡಿ, ರಕ್ತದಾನ ಇನ್ನೊಬ್ಬನ ಪ್ರಾಣ ಉಳಿಸಲು ಸಹಕಾರಿ. ಆರೋಗ್ಯವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ವೈದ್ಯಾಧಿಕಾರಿ ಡಾ.ಮಹಾದೇವ ಡಾವರಗಾಂವೆ, ಬೀದರ್ ಬ್ರಿಮ್ಸ್ ಆಸ್ಪತ್ರೆಯ ಡಾ.ಮಲ್ಲನಗೌಡ, ಮುಖಂಡರಾದ ಜಿತೇಂದ್ರ ಮೂಲಗೆ, ಸಿದ್ರಾಮ ಹೆಗಡೆ, ರವೀಂದ್ರ ರಾಯಜಿ, ಬಾಲಾಜಿ ಬಿರಾದಾರ, ನಾಗೇಶ ಮಹಾಜನ್, ಪುಂಡಲೀಕ ಪೂತೆ, ನಾಮದೇವ ರಾಠೋಡ್, ಸುನೀಲ ರಾಠೋಡ್, ಜಯಣ್ಣ ಸಿರಗಾಪುರ, ಕಲ್ಪನಾ ಹತ್ಯಾಳ, ಅಮೀತ್ ಯಮ್ಹಾನ್, ವಿಠ್ಠಲರಾವ ದಳಪತಿ, ಪಿಡಿಒ ಜ್ಯೋತಿ ಕೌವಡೆ ಇತರರಿದ್ದರು. ಚನ್ನಪ್ಪ ಹೊಲ್ಕರ್ ಸ್ವಾಗತಿಸಿದರು. ಭೀಮರಾವ ನಾಟೇಕರ್ ವಂದಿಸಿದರು. ಭೀಮಾಶಂಕರ ಪೂಜಾರಿ ನಿರೂಪಣೆ ಮಾಡಿದರು.
ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ. ತುರ್ತು ಪರಿಸ್ಥಿತಿಯಲ್ಲಿ ರೋಗಿ ಪಾಲಿಗೆ ಸಂಜೀವಿನಿಯಾಗಿ ಪರಿಣಮಿಸುವ ಅಮೂಲ್ಯ ವ್ಯವಸ್ಥೆ ರಕ್ತದಾನ. ವೈದ್ಯರ ಸಲಹೆಯಂತೆ ಯೋಗ್ಯರು ರಕ್ತದಾನಕ್ಕೆ ಮುಂದೆ ಬಂದು ಸಮಾಜದ ಹಿತ ಕಾಪಾಡುವಲ್ಲಿ ಕೈಜೋಡಿಸಬೇಕು.
| ಶ್ರೀ ಡಾ.ಚನ್ನವೀರ ಶಿವಾಚಾರ್ಯ ಸಂಸ್ಥಾನ ಹಿರೇಮಠ, ಹಾರಕೂಡ