ಗುಂಡ್ಲುಪೇಟೆ: ಕೇಂದ್ರ ಸರ್ಕಾರದ ಜನಪರ ಹಾಗೂ ಪ್ರಗತಿಪರ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ನೂತನ ಮಂಡಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರದ ಯೋಜನೆಗಳು ಅಸಮರ್ಪಕವಾಗಿವೆ. ಬಹಳಷ್ಟು ಜನರಿಗೆ ಇನ್ನೂ ವಿವಿಧ ಯೋಜನೆಗಳ ಲಾಭ ದೊರಕಿಲ್ಲ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರಿಗೆ ಉಪಯೋಗವಾಗುವ ಕಾರ್ಯಕ್ರಮ ಜಾರಿ ಮಾಡಿದ್ದಾರೆ. ಬಡವರೂ ಉಚಿತ ಖಾತೆ ತೆರೆಯುವಂತೆ ಮಾಡಿ ಸರ್ಕಾರದ ಯೋಜನೆಯ ಲಾಭ ದೊರಕಿಸಿದ್ದಾರೆ. ಕೇವಲ ಶ್ರೀಮಂತರ ಸ್ವತ್ತಾಗಿದ್ದ ಅಡುಗೆ ಅನಿಲ ಕಡುಬಡವರಿಗೂ ಸಿಗುವಂತೆ ಮಾಡಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲ ಮನೆಗಳಿಗೂ ನೀರಿನ ಸಂಪರ್ಕ ಕೊಡಿಸಿದ್ದಾರೆ. ಈ ಎಲ್ಲ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲು ಗ್ರಾಮ ಮಟ್ಟಗಳಲ್ಲಿ ಸಭೆ ನಡೆಸಬೇಕು ಎಂದು ಹೇಳಿದರು.
ನಿರ್ಗಮಿತ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ನಿರ್ಗಮಿತ ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ, ಜಿಲ್ಲಾ ಉಪಾಧ್ಯಕ್ಷ ಹಿರೀಕಾಟಿ ಸೋಮಶೇಖರ್, ಬಗರ್ ಹುಕುಂ ಸಮಿತಿಯ ಮಾಜಿ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎನ್.ಮಲ್ಲೇಶ್, ಎಸ್.ಎಂ.ಮಲ್ಲಿಕಾರ್ಜುನ, ಹೊರೆಯಾಲ ಕೃಷ್ಣ ಇತರರು ಇದ್ದರು.