Inauguration of BCA Computer Lab in SSKB College 
ಜಿಲ್ಲೆ

ಕಂಪ್ಯೂಟರ್ ಸಾಕ್ಷರತೆ ಅವಶ್ಯಕ

ರಾಜು ಯಮಕನಮರಡಿ

ಬಸವಕಲ್ಯಾಣ: ಸ್ಥಿತ್ಯಂತರಕ್ಕೆ ಅನುಗುಣವಾಗಿ ಶೈಕ್ಷಣಿಕ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಬದಲಾವಣೆಗಳು ಆಗಿದ್ದು, ಇಂದಿನ ಯುಗದಲ್ಲಿ ಕಂಪ್ಯೂಟರ್ ಸಾಕ್ಷರತೆ ಅತ್ಯಂತ ಮಹತ್ವ ಪಡೆದಿದೆ ಎಂದು ಎಂಎಲ್ಸಿ ಎಂ.ಜಿ.ಮುಳೆ ಹೇಳಿದರು.

ನಗರದ ಎಸ್‌ಎಸ್‌ಕೆ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬಿಸಿಎ ವಿಭಾಗದಲ್ಲಿ ಕಂಪ್ಯೂಟರ್ ಲ್ಯಾಬ್ ಹಾಗೂ ಕಲಾ, ವಿಜ್ಞಾನ ವಾಣಿಜ್ಯ ಅಕಾಡೆಮಿ(೨೦೨೪-೨೫) ಉದ್ಘಾಟಿಸಿ ಮಾತನಾಡಿದ ಅವರು, ಈ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳಿದ್ದು, ಹೊಸ ಕಂಪ್ಯೂಟರ್ ಲ್ಯಾಬ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಬೀದರ್ ಜಿಲ್ಲೆಯಲ್ಲಿ ಎಸ್‌ಎಸ್‌ಕೆ ಬಸವೇಶ್ವರ ಪದವಿ ಮಹಾವಿದ್ಯಾಲಯ ಪ್ರಸಿದ್ಧವಾಗಿದ್ದು, ರ‍್ಯಾಂಕ್ ಗಳಿಸುವ ಕೇಂದ್ರವಾಗಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸದಾ ಮುಂದಿರುವ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಈ ಮಹಾವಿದ್ಯಾಲಯ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದೆ. ವಿದ್ಯಾರ್ಥಿಗಳು ಇಲ್ಲಿ ಸೌಲಭ್ಯಗಳನ್ನು ಬಳಸಿಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಗಣಕ ವಿಭಾಗದ ಮುಖ್ಯಸ್ಥ ಪ್ರೊ.ಶಿವಾನಂದ ರುಮ್ಮಾ ಮಾತನಾಡಿ, ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಇದು ಅವಶ್ಯವೂ ಆಗಿದೆ. ಶ್ರಮ ವಹಿಸಿ ಅಭ್ಯಾಸ ಮಾಡುವ ಜತೆಗೆ ಸ್ಪರ್ಧಾತ್ಮಕ ಜ್ಞಾನ ಬೆಳೆಸಿಕೊಳ್ಳಬೇಕು. ಬಿಸಿಎ ಪದವೀಧರರಿಗೆ ಸಾಕಷ್ಟು ಕಂಪನಿಗಳಲ್ಲಿ ಉದ್ಯೋಗಾವಕಾಶಗಳಿವೆ. ಶಿಸ್ತು, ಪ್ರಾಮಾಣಿಕತೆ, ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಪ್ರಾಮಾಣಿಕತೆ, ಪರಿಶ್ರಮ ಅವಶ್ಯಕ. ಒಂದು ರಾಷ್ಟç ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿನ ಸೌಲಭ್ಯಗಳನ್ನು ಉಪಯೋಗಿಸಿ ಶ್ರಮ ವಹಿಸಿ ಅಧ್ಯಯನ ಮಾಡಿದರೆ ಯಶಸ್ಸು ನಿಮ್ಮದಾಗಲಿದೆ ಎಂದರು.

ಪ್ರೊ.ಆರ್.ಡಿ.ಬಾಲಕಿಲೆ, ಲಕ್ಷ್ಮೀಬಾಯಿ ಭಂಕೂರ, ಡಾ.ಸುರೇಶ ಎಚ್‌ಆರ್, ಕಲ್ಯಾಣಪ್ಪ ನಾವದಗಿ, ಗ್ರಂಥಪಾಲಕ ಸೂರ್ಯಕಾಂತ ನಾಸೆ, ನವೀನ ಶ್ರೀವಾಸ್ತವ, ಭಾರತಿ ಮಠ, ಅಶ್ವಿನಿ ಜಲಾದೆ, ಶಿವಕುಮಾರ್ ಕೊಲ್ಲೆ, ಸನತ್‌ರೆಡ್ಡಿ, ಸತೀಶ ರಾಠೋಡ್, ಭೀಮಾಶಂಕರ ಪೂಜಾರಿ, ಮಹಾದೇವ ದೇಗಾಂವ ಇತರರಿದ್ದರು.

ಡಾ. ರಮೇಶ್ ಕೆ.ಬಿ. ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್ ಮಹಾವಿದ್ಯಾಲಯದ ವಾರ್ಷಿಕ ವರದಿ ವಾಚನ ಮಾಡಿದರು. ಡಾ.ಎಂ.ಜಿ.ಪಾಟೀಲ್ ವಂದಿಸಿದರು. ಪ್ರೊ.ವಿಠೋಬಾ ಡೊಣ್ಣೆಗೌಡರ ನಿರೂಪಣೆ ಮಾಡಿದರು. ರಾಜಶ್ರೀ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ನಾಡಗೀತೆ ಹಾಡಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಬಿಎಸ್ಸಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಕು.ರಾಧಿಕಾ ಮತ್ತು ನಾಲ್ಕನೇ ರ‍್ಯಾಂಕ್ ಪಡೆದ ಸ್ವಾತಿ ಅವರನ್ನು ಸನ್ಮಾನಿಸಲಾಯಿತು.