ಲೋಕಾರ್ಪಣೆಗೆ ಸಿದ್ಧಗೊಂಡ ಬಂದಾರು-ಕೊಕ್ಕಡ ಗ್ರಾಮಗಳನ್ನು ಬೆಸೆಯುವ ಮೈಪಾಲ ಸೇತುವೆ. 
ಜಿಲ್ಲೆ

ಮೈಪಾಲ ಸೇತುವೆ ಬೇಡಿಕೆ ಈಡೇರಿಕೆ : 72 ಕೋಟಿ ರೂ.ವೆಚ್ಚ : ಕಿಂಡಿಅಣೆಕಟ್ಟು ಸಹಿತ ಬ್ರಿಜ್ ಲೋಕಾರ್ಪಣೆಗೆ ಸಿದ್ಧ

ಸೌಮ್ಯ ಆರ್

ಮನೋಹರ ಬಳಂಜ ಬೆಳ್ತಂಗಡಿ

ಬಂದಾರು ಮತ್ತು ಕೊಕ್ಕಡ ಗ್ರಾಮಗಳನ್ನು ಸಂಪರ್ಕಿಸುವ ಮೈಪಾಲ ಎಂಬಲ್ಲಿ ಒಂದು ವರ್ಷದ ಹಿಂದೆ ಪ್ರಾರಂಭವಾದ 72 ಕೋಟಿ ವೆಚ್ಚದ ಕಿಂಡಿಅಣೆಕಟ್ಟು ಸಹಿತ ಸೇತುವೆ(ಬ್ರಿಡ್ಜ್ ಕಂ ಬ್ಯಾರೇಜ್)ಯ ಕಾಮಗಾರಿ ಒಂದು ವರ್ಷದ ಒಳಗೆ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ.

ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಜನರ ಬಹು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದ್ದು, ಮಳೆಗಾಲದಲ್ಲಿ ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ಸಂಕಷ್ಟ ದೂರವಾಗಿದೆ ಎಂದು ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಕಣಿಯೂರು, ಬಂದಾರು, ಬೆಳಾಲು, ಮೊಗ್ರು, ಇಳಂತಿಲ, ಉರುವಾಲು, ತೆಕ್ಕಾರು, ಬಾರ್ಯ, ತಣ್ಣಿರುಪಂತ, ಮಚ್ಚಿನ ಸೇರಿದಂತೆ ಸುಮಾರು ಹತ್ತು ಗ್ರಾಮಗಳು ಕೊಕ್ಕಡ ಹೋಬಳಿ ಜನರು ಕಂದಾಯ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನಾಡ ಕಚೇರಿ ಇರುವ ಕೊಕ್ಕಡಕ್ಕೆ ಹೋಗಲು ಸುತ್ತುಬಳಸಿ ಪ್ರಯಾಣಿಸಬೇಕಿತ್ತು.

ಕೊಕ್ಕಡಕ್ಕೆ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಪಟ್ರಮೆ ಮೂಲಕ ಸುತ್ತು ಬಳಸಿ, ಹೋಗಬೇಕು ಅಥವಾ ಕುಪ್ಪೆಟ್ಟಿ, ಕಣಿಯೂರು, ಪದ್ಮುಂಜ, ಉಜಿರೆ ಧರ್ಮಸ್ಥಳ ಪಟ್ರಮೆ ಅಥವಾ ನಿಡ್ಲೆ ಮೂಲಕ ಹೋಗಬೇಕಾಗುತ್ತದೆ. ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಅನೇಕ ವರ್ಷಗಳಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದರು.

ಕೊಕ್ಕಡಕ್ಕೆ ಹೋಗಲು ಹತ್ತಿರದ ದಾರಿಯೊಂದಿದೆ. ಅದುವೇ ಕೊಕ್ಕಡ ಮತ್ತು ಬಂದಾರು ಗ್ರಾಮವನ್ನು ಸಂಪರ್ಕಿಸುವ ಮೈಪಾಲ ಎಂಬಲ್ಲಿಂದ. ಇಲ್ಲಿಂದ ಕೊಕ್ಕಡಕ್ಕೆ ಕೇವಲ ಐದು ಕಿ.ಮೀ ದೂರ. ಮೈಪಾಲದಲ್ಲಿ ನೇತ್ರಾವತಿ ನದಿ ಹಾದು ಹೋಗುತ್ತಿದೆ. ಬೇಸಿಗೆ ಕಾಲದಲ್ಲಿ ನದಿಗೆ ಇಳಿದು ವಾಹನಗಳು ಸಂಚರಿಸುತ್ತವೆ. ಆದರೆ ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಇರುವುದರಿಂದ ಸಂಪರ್ಕ ಕಡಿತಗೊಂಡು ಜನರು ಕೊಕ್ಕಡಕ್ಕೆ ಉಜಿರೆ, ಧರ್ಮಸ್ಥಳ ಮೂಲಕವೇ ಸುತ್ತುಬಳಸಿ ಹೋಗಬೇಕಾಗುತ್ತದೆ.

ಲೆಕ್ಕವಿಲ್ಲದಷ್ಟು ಮನವಿ ಸಲ್ಲಿಕೆ

ಸೇತುವೆ ಬೇಕೆಂದು ಈ ಭಾಗದ ಜನರು ಸಲ್ಲಿಸಿದ ಮನವಿಗೆ ಲೆಕ್ಕವಿಲ್ಲ. ಗ್ರಾಮಸಭೆಯಲ್ಲೂ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಹಲವು ಸರ್ಕಾರಗಳು ಬಂದು ಹೋದರೂ ಮೈಪಾಲಕ್ಕೆ ಸೇತುವೆ ಮರೀಚಿಕೆಯಾಗಿತ್ತು. ಆದರೂ ಜನರು ಪ್ರತಿ ವರ್ಷ ಮನವಿ ಸಲ್ಲಿಸುತ್ತಿದ್ದರು. ಶಾಸಕ ಹರೀಶ್ ಪೂಂಜ ಈ ಭಾಗದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ನಾಗರಿಕರು ಮೈಪಾಲಕ್ಕೆ ಸೇತುವೆಯ ಬೇಡಿಕೆಯ ಮನವಿ ಸಲ್ಲಿಸಿದ್ದು, ತಾನು ಶಾಸಕನಾಗಿ ಆಯ್ಕೆಯಾದರೆ ತಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು.

ಈ ಭಾಗದ ಜನರ ಪ್ರಯತ್ನ ಹಾಗೂ ಮನವಿಯ ಹಿನ್ನೆಲೆಯಲ್ಲಿ ಹಾಗೂ ಶಾಸಕ ಹರೀಶ್ ಪೂಂಜ ಅವರ ಸತತ ಶ್ರಮದ ಫಲವಾಗಿ, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ಕಾರ ಇಲ್ಲಿಗೆ ಸುಮಾರು 72 ಕೋಟಿ ರೂ. ವೆಚ್ಚದ ಕಿಂಡಿಅಣೆಕಟ್ಟು ಸಹಿತ ಸೇತುವೆ ಮಂಜೂರುಗೊಳಿಸುವುದರ ಮೂಲಕ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿತ್ತು.

ಒಂದು ವರ್ಷದ ಒಳಗೆ ರೆಡಿ

2023 ಮಾ.10ರಂದು ಹರೀಶ್ ಪೂಂಜ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಕಿಂಡಿಅಣೆಕಟ್ಟು ಸಹಿತ ಸೇತುವೆ 180 ಮೀಟರ್ ಉದ್ದ, 7.5 ಮೀಟರ್ ಅಗಲ ಮತ್ತು 11.50 ಮೀಟರ್ ಎತ್ತರ ಇದ್ದು, 12 ಫಿಲ್ಲರ್‌ಗಳನ್ನು ಹೊಂದಿದೆ. ಕಿಂಡಿಅಣೆಕಟ್ಟೆಗೆ 13 ಕಿಂಡಿಗಳನ್ನು ರಚಿಸಲಾಗಿದೆ. ಸೇತುವೆಯ ಎರಡು ಬದಿಗೆ ತಡೆಗೋಡೆ ನಿರ್ಮಿಸಲಾಗಿದೆ. ಇಕ್ಕೆಲಗಳಲ್ಲಿ ಮಣ್ಣಿನ ರಸ್ತೆಗಳಿದ್ದು, ಸೇತುವೆಗೆ ರಸ್ತೆ ಸಂಪರ್ಕಕ್ಕಾಗಿ ಮಣ್ಣು ತುಂಬಿಸುವ ಕಾರ್ಯ ನಡೆದಿದೆ. ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧಗೊಂಡಿದೆ. ನೀರು ನಿಲ್ಲಲು ಫೈಬರ್ ತಂತ್ರಜ್ಞಾನದ(ಎಫ್.ಆರ್.ಸಿ) ಹಲಗೆಯುಳ್ಳ ಲಿಫ್ಟ್ ಗೇಟನ್ನು ಅಳವಡಿಸಲಾಗುತ್ತದೆ.

ಮೈಪಾಲಕ್ಕೆ ಸೇತುವೆ ಆಗಬೇಕು ಎಂದು ನಾನು ಕನಸು ಕಂಡಿದ್ದೆ. ಕೊಕ್ಕಡದಲ್ಲಿ ನಾಡಕಚೇರಿ ಇರುವುದರಿಂದ ಬಂದಾರಿನಿಂದ ಬಾರ್ಯ, ತೆಕ್ಕಾರು ತನಕದ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಜತೆಗೆ ಇದು ನೆಲ್ಯಾಡಿ ಮತ್ತು ಗೋಳಿತೊಟ್ಟುಗೆ ಸಂಪರ್ಕ ಕಲ್ಪಿಸುವ ಹತ್ತಿರದ ರಸ್ತೆಯಾಗಲಿರುವುದರಿಂದ ಸೌತಡ್ಕ ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಬರುವ ಭಕ್ತರು ಸೇರಿದಂತೆ ನಾಗರಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ. ಧರ್ಮಸ್ಥಳ, ಕೊಕ್ಕಡ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಬರುವ ಭಕ್ತರಿಗೂ ಹತ್ತಿರದ ದಾರಿಯಾಗಲಿದೆ. - ಹರೀಶ್ ಪೂಂಜ, ಶಾಸಕರು ಈ ಸೇತುವೆ ಮತ್ತು ಕಿಂಡಿ ಆಣೆಕಟ್ಟೆಯಿಂದ ಈ ಭಾಗ ಜನರಿಗೆ, ಕೊಕ್ಕಡ ಹೋಬಳಿಗೆ ಹೋಗುವ ಜನರಿಗೆ ತುಂಬಾ ಅನುಕೂಲವಾಗಿದೆ. ಜನರು 30 ಕಿಲೋಮೀಟರ್ ದೂರ ಹೋಗುವ ಪರಿಸ್ಥಿತಿ ಇತ್ತು. ಇನ್ನು ಮುಂದೆ 8-9 ಕಿಲೋಮೀಟರ್ ಒಳಗಡೆ ತಲುಪಬಹುದು. ಕಿಂಡಿಅಣೆಕಟ್ಟು ಇರುವುದರಿಂದ ಅಂತರ್ಜಲ ವೃದ್ಧಿಯಾಗುತ್ತಿದೆ. - ದಿನೇಶ್ ಖಂಡಿಗ, ಅಧ್ಯಕ್ಷರು ಗ್ರಾಪಂ ಬಂದಾರು ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಆರು ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಂಡಿದೆ. ಬೆಳಾಲು, ಪಟ್ರಮೆ, ಬಂದಾರು, ಕೊಕ್ಕಡ, ಬಂದಾರು ಪರಿಸರದಲ್ಲಿ ಅಂತರ್ಜಲ ಜಾಸ್ತಿಯಾಗಿ ಕೃಷಿಗೆ ಅನುಕೂಲವಾಗಲಿದೆ. ನಮಗೆ ಹೋಬಳಿ ಕಚೇರಿಗೆ ಹೋಗಲು, ಆ ಭಾಗದವರಿಗೆ ಬೆಳ್ತಂಗಡಿ, ಉಪ್ಪಿನಂಗಡಿಗೆ ಹೋಗಲು, ಸುಬ್ರಹ್ಮಣ್ಯ, ಕೊಕ್ಕಡಕ್ಕೆ ಹೋಗಲು ಈಗ ಹತ್ತಿರದ ದಾರಿಯಾಗಿದೆ. ಸೇತುವೆಯ ಇಕ್ಕಡೆಗಳಲ್ಲಿ ಮಣ್ಣಿನ ರಸ್ತೆಯನ್ನು ಐದೂವರೆ ಮೀಟರ್ ಆಗಲ ರಸ್ತೆಯಾಗಿ ಮಾಡಿಕೊಡುತ್ತೇವೆ ಎಂದು ಶಾಸಕರು ಭರವಸೆ ನೀಡಿದ್ದಾರೆ. ಊರಿನವರು, ಹತ್ತಿರದ ಜಾಗದವರು ಸಹಕಾರ ನೀಡಿದ್ದಾರೆ. - ಮಹಾಬಲ ಗೌಡ, ತಾ.ಪಂ ಮಾಜಿ ಸದಸ್ಯ ಬಂದಾರು https://www.vijayavani.net/creating-an-atmosphere-of-fear-among-hindus https://www.vijayavani.net/juvenile-kills-aunt-after-attempting-to-rape-her