ವಿಜಯವಾಣಿ ಸುದ್ದಿಜಾಲ ಉಡುಪಿ
ಕೋರ್ಟ್ನಲ್ಲಿ ವಕಾಲತು ಮಾಡುವಾಗ ಪ್ರಕರಣಕ್ಕೆ ಸಂಬಂಧಿಸಿ ವಕೀಲರು ಹಾಗೂ ನ್ಯಾಯದಾನಕ್ಕೆ ಸಂಬಂಧಿಸಿ ನ್ಯಾಯಾಧೀಶರು ಹೆಚ್ಚಿನ ಚಿಂತನೆಗೆ ಒಳಪಡುವುದರಿಂದ ಮಾನಸಿಕವಾಗಿ ಒತ್ತಡ ಅನುಭವಿಸುತ್ತಾರೆ. ಅದರಿಂದ ಪಾರಾಗಲು ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ಅಭಿಪ್ರಾಯಪಟ್ಟರು.
ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಉಡುಪಿಯ ಎಂಜಿಎಂ ಮೈದಾನದಲ್ಲಿ ಮಾ.1ರಂದು ಸಂಜೆ ಆಯೋಜಿಸಿದ್ದ ಎರಡು ದಿನದ ರಾಜ್ಯಮಟ್ಟದ ಹೊನಲು-ಬೆಳಕಿನ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಹಿರಿಯ ವಕೀಲ ವಿಜಯಕುಮಾರ್ ಶೆಟ್ಟಿ ನಾಡಗೀತೆ ಹಾಡಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ಹಿರಿಯ ವಕೀಲೆ ಮೇರಿ ಎ.ಆರ್. ಶ್ರೇಷ್ಠಾ ಕಾರ್ಯಕ್ರಮ ನಿರೂಪಿಸಿದರು.
ಉಡುಪಿಯ ವಕೀಲರ ಸಂಘದಿಂದ ಆಯೋಜನೆಗೊಂಡ ರಾಜ್ಯಮಟ್ಟದ ಈ ಕ್ರೀಡಾಕೂಟ ಮಾದರಿಯಾಗಿದೆ. ಇದು ಇಲ್ಲಿಗೇ ನಿಲ್ಲಬಾರದು. ರಾಜ್ಯದ ಪ್ರತಿಜಿಲ್ಲೆಯಲ್ಲೂ ಪಂದ್ಯಾಟ ಆಯೋಜಿಸುವಂತಾಗಬೇಕು. ಇದರಿಂದ ರಾಜ್ಯ, ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರು, ನ್ಯಾಯಾಧೀಶರ ನಡುವೆಯೂ ಪರಸ್ಪರ ಸಮನ್ವಯ ಹಾಗೂ ಸೌಹಾರ್ದ ಬೆಳೆಯುತ್ತದೆ. | ವಿ.ಕಾಮೇಶ್ವರ್ ರಾವ್. ಹೈಕೋರ್ಟ್ ನ್ಯಾಯಮೂರ್ತಿ ವಕೀಲರಲ್ಲೂ ಕ್ರೀಡಾ ಪ್ರತಿಭೆ ಇದೆಯೆಂದು ತೋರ್ಪಡಿಸಲು ಹಾಗೂ ವಕೀಲರಲ್ಲಿರುವ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಉಡುಪಿಯಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ. ಹೊನಲು-ಬೆಳಕಿನ ಕ್ರೀಡಾಕೂಟದಲ್ಲಿ 39 ಕ್ರಿಕೆಟ್ ತಂಡ, 16 ವಾಲಿಬಾಲ್ ತಂಡ, 10 ಥ್ರೋಬಾಲ್ ತಂಡ ಹಾಗೂ 40 ಶಟಲ್ ಬ್ಯಾಡ್ಮಿಂಟನ್ ತಂಡ ಭಾಗವಹಿಸಿವೆ. | ರೆನೋಲ್ಡ್ ಪ್ರವೀಣಕುಮಾರ್. ಉಡುಪಿ ವಕೀಲರ ಸಂಘದ ಅಧ್ಯಕ್ಷ