ಜಿಲ್ಲೆ

ವಿಶ್ವಮಟ್ಟದಲ್ಲಿ ಅಲಯನ್ಸ್ ನಿರಂತರ ಸೇವೆ: ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಹೇಳಿಕೆ

ಮಂಡ್ಯ: ಇತ್ತೀಚಿನ ದಿನಗಳಲ್ಲಿ ವಿಶ್ವಮಟ್ಟದಲ್ಲಿ ಅಲಯನ್ಸ್ ಸಂಸ್ಥೆ ತನ್ನದೇ ಆದ ಸೇವಾಕಾರ್ಯ ಸಮರ್ಪಿಸುತ್ತಿದೆ ಎಂದು ಅಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜು ವಿ.ಬೈರಿ ಹೇಳಿದರು.

ನಗರದ ಬಾಲಭವನದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಮಂಡ್ಯ ಸಮೃದ್ಧಿ ಅಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಹುಟ್ಟಿ ಬೆಳೆದ ಅಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶಗಳಲ್ಲಿ ತನ್ನ ಸದಸ್ಯರು, ಪ್ರತಿನಿಧಿಗಳು, ನಿರ್ದೇಶಕರನ್ನು ಹೊಂದಿದೆ, ಅತಿ ಕಡಿಮೆ ನೋಂದಣಿ ಶುಲ್ಕದಡಿ ಕೋಟ್ಯಂತರ ಜನ ಸದಸ್ಯರಿದ್ದಾರೆ. ಕ್ಯಾನ್ಸರ್, ಪರಿಸರ, ನೆರವು, ಪ್ರಕೃತಿ ವಿಕೋಪಗಳಿಗೆ ಸೇವಾ ಕಾರ್ಯ ಮಾಡುವ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದುಕೊಳ್ಳುತ್ತಿದೆ ಎಂದು ನುಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವಾ ಸಂಸ್ಥೆಗಳಾದ ರೋಟರಿ, ಲಯನ್ಸ್ ಸಂಸ್ಥೆಗಳನ್ನೇ ಹಿಂದಿಕ್ಕಿ ಭಾರತೀಯ ಮೂಲದ ಅಲಯನ್ಸ್ ಸಂಸ್ಥೆ ಪ್ರವರ್ಧಮಾನದಲ್ಲಿ ಬೆಳೆಯುತ್ತಿದೆ. ಜಿಲ್ಲೆಯಲ್ಲಿ 33 ಅಲಯನ್ಸ್ ಸಂಸ್ಥೆಗಳು ಸೇವೆ ನೀಡುತ್ತಿವೆ. ಸಾವಿರಾರು ಜನರು ಸ್ವಯಂ ಪ್ರೇರಿತರಾಗಿ ನೋಂದಣಿ ಮಾಡಿಸಿಕೊಂಡು ಸಮಾಜಮುಖಿಯಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಮಂಡ್ಯ ಸಮೃದ್ಧಿ ಅಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷೆ ಪ್ರಮೀಳಾ ಕುಮಾರಿ ಮಾತನಾಡಿ, ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ವಿವಿಧ ಸೇವಾ ಕಾರ್ಯಕ್ರಮ ಆಯೋಜಿಸಲಾಗುವುದು. ಕ್ಯಾನ್ಸರ್ ರೋಗ ತಜ್ಞರಿಂದ ಮತ್ತು ವೈದ್ಯಕೀಯ ತಪಾಸಣೆ ಮಾಡಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ವಿವಿಧ ರೀತಿಯ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿವೆ. ಮೊದಲ ಹಂತದಲ್ಲಿಯೇ ಸೂಕ್ತ ರೀತಿಯಲ್ಲಿ ಪತ್ತೆ ಹಚ್ಚುವುದು, ಗುಣಮಟ್ಟದ ಚಿಕಿತ್ಸೆ, ಆತ್ಮವಿಶ್ವಾಸದಿಂದ ಬದುಕುವ ಜೀವನಶೈಲಿಯನ್ನು ತಿಳಿಸಿಕೊಡಬೇಕಿದೆ ಎಂದು ಸಲಹೆ ನೀಡಿದರು.

ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಮಾಜಿ ಅಧ್ಯಕ್ಷೆ ನೀನಾ ಪಟೇಲ್, ಜಿಲ್ಲಾ ಗವರ್ನರ್ ಎಚ್.ಮಾದೇಗೌಡ, 1ನೇ ಉಪ ಗವರ್ನರ್ ಕೆ.ಆರ್.ಶಶಿಧರ್ ಈಚಗೆರೆ, 2ನೇ ಉಪ ಗವರ್ನರ್ ಕೆ.ಎಸ್.ಚಂದ್ರಶೇಖರ್, ಸಂಪುಟ ಕಾರ್ಯದರ್ಶಿ ನಾಗರಾಜು, ಖಜಾಂಚಿ ಆರ್.ಮಹೇಶ್, ಪ್ರಾಂತೀಯ ಅಧ್ಯಕ್ಷ ಟಿ.ನಾಗರಾಜು, ಅಮೃತ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ಶಿಲ್ಪಾ, ಅಂಬುಜಾಕ್ಷಿ, ಪ್ರೀತಿ, ಪವಿತ್ರಾ ಇತರರಿದ್ದರು.