ಜಿಲ್ಲೆ

ಹಣದಿಂದಲೇ ಎಲ್ಲವೂ ಸಾಧ್ಯವಾಗಲ್ಲ: ಅಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ.ಭೈರಿ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಹಣ ಇದ್ದರೆ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಹಣವನ್ನು ಹೊರತುಪಡಿಸಿ ಸಮಯ ಕೊಟ್ಟು ಕೆಲಸ ಮಾಡಿದರೆ ಎಲ್ಲದರಲ್ಲೂ ಯಶಸ್ಸು ಪಡೆಯಲು ಸಾಧ್ಯ ಎಂದು ಅಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ.ಭೈರಿ ಸಲಹೆ ನೀಡಿದರು.

ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಮಂಡ್ಯ ಅಮೃತ ಅಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ, ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಹಲವಾರು ಸಂಸ್ಥೆ ಹುಟ್ಟು ಹಾಕಿದ್ದೇವೆ. ಆದರೆ ಕೆಲ ಸಂಸ್ಥೆಗಳು ಈಗಾಗಲೇ ಮುಚ್ಚಿಹೋಗಿವೆ. ಅದಕ್ಕೆ ಹಣದ ಕೊರತೆ ಇರಲಿಲ್ಲ. ಸಮಯ ಕೊಟ್ಟು ಕೆಲಸ ಮಾಡುವ ಕಟ್ಟಾಳುಗಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿವೆ ಎಂದು ವಿಷಾದಿಸಿದರು.

ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ ಉತ್ತಮವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಹಣವನ್ನು ಇತಿಮಿತವಾಗಿ ಖರ್ಚು ಮಾಡುತ್ತಾರೆ. ಆದರೆ ಹೆಚ್ಚು ಸಮಯವನ್ನು ಸಂಸ್ಥೆಗೆ ನೀಡುವ ಸದಸ್ಯರು ಇದ್ದಾರೆ. ಹಾಗಾಗಿ ಈ ಸಂಸ್ಥೆ ದಿನದಿಂದ ದಿನಕ್ಕೆ ಉನ್ನತ ಮಟ್ಟಕ್ಕೆ ತಲುಪುತ್ತಿದೆ ಎಂದು ಶ್ಲಾಘಿಸಿದ ಅವರು, ರೋಟರಿ ಸಂಸ್ಥೆ ಪೋಲಿಯೋ ಮುಕ್ತ ಭಾರತಕ್ಕಾಗಿ ಶ್ರಮಿಸಿತ್ತು. ಲಯನ್ಸ್ ಸಂಸ್ಥೆ ನೇತ್ರ ತಪಾಸಣೆಗಾಗಿ ದುಡಿದಿತ್ತು. ಅಲಯನ್ಸ್ ಸಂಸ್ಥೆಗಳು ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಹೋಗಿ ಸೇವೆ ಮಾಡುವುದು, ಕ್ಯಾನ್ಸರ್ ಅರಿವು ಮೂಡಿಸುವಂತಹ ಮೂರು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಸೇವೆ ಮಾಡಲು ಹೆಚ್ಚು ಸಮಯ ಬೇಕೇ ಹೊರತು ಹಣವಲ್ಲ ಎಂದು ಪ್ರತಿಪಾದಿಸಿದರು.

ನಿಕಟಪೂರ್ವ ಉಪ ಗವರ್ನರ್ ಚಂದ್ರಶೇಖರ್ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಪುಟ ಕಾರ್ಯದರ್ಶಿ ವಿ.ಎಸ್.ನಾಗರಾಜು, ಜಿಲ್ಲಾ ಸಂಪುಟ ಖಜಾಂಚಿ ಮಹೇಶ್, ಪ್ರಾಂತೀಯ ಅಧ್ಯಕ್ಷ ಟಿ.ನಾಗರಾಜು, ವಲಯಾಧ್ಯಕ್ಷ ಶಿವಕುಮಾರ್, ಅಶ್ವಿನಿ, ಮೋಹನ್, ಜಗದೀಶ್, ರವಿ, ಮಂಜುನಾಥ್, ಸತೀಶ್ ಇತರರಿದ್ದರು.