ಶ್ರೀ ಕ್ಷೇತ್ರ ಧರ್ಮಸ್ಥಳದ ಧಾರ್ಮಿಕ ಪ್ರವಚನ ಮಂದಿರದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಐವತ್ತರ ಸಂಭ್ರಮ ಸುವರ್ಣ ಪರ್ವವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು.  
ಜಿಲ್ಲೆ

ಕಲಾ ಕ್ಷೇತ್ರದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ

ಕೋಟ: ಮಕ್ಕಳ ಮನಸ್ಸಿನಲ್ಲಿ ಕಲೆಯ ಬೀಜ ಬಿತ್ತಿದಾಗ ಅದು ಸಾರ್ಥಕವಾಗಿ ಮುಂದೆ ಕಲಾ ಶ್ರೀಮಂತಿಕೆ ಮೆರೆಯುವುದಕ್ಕೆ ಸಾಧ್ಯ. ಆದಷ್ಟು ಹೆಚ್ಚು ಮಕ್ಕಳನ್ನು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧಾರ್ಮಿಕ ಪ್ರವಚನ ಮಂದಿರದಲ್ಲಿ ಗುರುವಾರ ಸಾಲಿಗ್ರಾಮ ಮಕ್ಕಳ ಮೇಳದ ಐವತ್ತರ ಸಂಭ್ರಮ ಸುವರ್ಣ ಪರ್ವವನ್ನು ಉದ್ಘಾಟಿಸಿ ಮಾತನಾಡಿದರು. ಚಾರಿತ್ರಿಕ ದಾಖಲೆ ನಿರ್ಮಿಸಿ, ಸಾಲಿಗ್ರಾಮ ಮಕ್ಕಳ ಮೇಳ ಕಟ್ಟಿ ಬೆಳೆಸಿ, ಸಾಂಪ್ರದಾಯಿಕ ರಂಗ ಪ್ರದರ್ಶನದೊಂದಿಗೆ ಐವತ್ತು ವರ್ಷಗಳ ಕಾಲ ಮುನ್ನೆಡಿಸಿದ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರ ಸಾಧನೆ ಅಪೂರ್ವ. ಅದೆಷ್ಟೋ ಮಕ್ಕಳು ಈ ತಂಡದಿಂದ ಕಲಾವಿದರಾಗಿ, ಕಲಾಭಿಮಾನಿಗಳಾಗಿ ಹೊರಬಂದಿದ್ದಾರೆ. ಮೇಳವನ್ನು ಈಗಲೂ ಮುನ್ನೆಡೆಸುತ್ತಿರುವ ಈಗಿನ ನಿರ್ದೇಶಕರ ಸಾಹಸ ಶ್ಲಾಘನೀಯ. ಸುವರ್ಣ ಪರ್ವ ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷ ರಥ ಶತಕದತ್ತ ಯಶಸ್ವಿಯಾಗಿ ಸಾಗಲಿ ಎಂದರು.

ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ತಾಳಮದ್ದಳೆಯ ಅರ್ಥಧಾರಿ, ಸಂಘಟಕ ಉಜಿರೆ ಅಶೋಕ ಭಟ್,ಮಕ್ಕಳ ಮೇಳ ಟ್ರಸ್ಟ್ ಕಾರ್ಯಾಧ್ಯಕ್ಷ ಕೆ.ಮಹೇಶ್ ಉಡುಪ, ಉಪಾಧ್ಯಕ್ಷ ಜನಾರ್ದನ ಹಂದೆ, ಮಕ್ಕಳ ಮೇಳದ ಮೊದಲ ವರ್ಷದ ಕಲಾವಿದ ಮೋಹನದಾಸ ಶಾನುಭಾಗ್ ಉಪಸ್ಥಿತರಿದ್ದರು. ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಾದ ಸಾಲಿಗ್ರಾಮ ರಾಘವೇಂದ್ರ ನಾಯಿರಿ ಸ್ವಾಗತಿಸಿ, ಕಾವ್ಯ ವಂದಿಸಿದರು. ಮಕ್ಕಳ ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಪರ್ವದ ಅಂಗವಾಗಿ ನವರಾತ್ರಿಯ ಶುಭಾವಸರದಲ್ಲಿ ಮಕ್ಕಳ ಮೇಳದ ಕಲಾವಿದರಿಂದ ಹೂವಿನಕೋಲು ಪ್ರದರ್ಶನ ನಡೆಯಿತು.