ಜಿಲ್ಲೆ

ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಸುಸಜ್ಜಿತ ಲಾಂಜ್​ ನಿರ್ಮಾಣ: ಸಂತೋಷ್​ ಕುಮಾರ್​ ಝಾ

ಉಡುಪಿ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಪಾಡ್​ ಹೋಟೆಲ್​ಗಳು ಮತ್ತು ಸುಸಜ್ಜಿತ ಲಾಂಜ್​ ನಿರ್ಮಾಣಕ್ಕೆ 3 ತಿಂಗಳಲ್ಲಿ ಟೆಂಡರ್​ ಅಹ್ವಾನಿಸಲಾಗುವುದು ಎಂದು ಕೊಂಕಣ ರೈಲ್ವೆಯ ಕಾರ್ಯಾಚರಣೆ ವಿಭಾಗ ನಿರ್ದೇಶಕ ಸಂತೋಷ್​ ಕುಮಾರ್​ ಝಾ ತಿಳಿಸಿದ್ದಾರೆ.

ಉಡುಪಿ ರೈಲ್ವೇ ನಿಲ್ದಾಣದಲ್ಲಿ ನೂತನವಾಗಿ ನವೀಕರಣಗೊಂಡಿರುವ ವಿಶ್ರಾಂತಿ ಕೊಠಡಿ ಹಾಗೂ ಡಾರ್ಮೆಂಟರಿ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿಗೆ ದೇಶಾದ್ಯಂತ ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿ ಸಾವಿರಾರು ಜನರು ಆಗಮಿಸುತ್ತಾರೆ. ಪಾಡ್​ ಹೋಟೆಲ್​ ಹೊಸ ಪರಿಕಲ್ಪನೆಯಾಗಿದ್ದು, ಇತರ ಹೋಟೆಲ್​ಗಳು ಕನಿಷ್ಠ 12 ಅಥವಾ 24 ಗಂಟೆಗಳ ಚೆಕ್​-ಇನ್​ ಮತ್ತು ಚೆಕ್​ ಔಟ್​ ಸಮಯವನ್ನು ಹೊಂದಿರುತ್ತವೆ. ಆದರೆ ಪಾಡ್​ ಹೋಟೆಲ್​ ಸೌಲಭ್ಯವನ್ನು ಪ್ರಯಾಣಿಕರ ಅಗತ್ಯತೆಯ ಆಧಾರದ ಮೇಲೆ 6,12,18 ಅಥವಾ 24 ಗಂಟೆಗಳ ಅವಧಿಗೆ ಬಳಸಿಕೊಳ್ಳಬಹುದು. ಭಾರತೀಯ ರೈಲ್ವೆಯ ಮುಂಬೈ, ಚೆನ್ನೈನಂತಹ ನಿಲ್ದಾಣಗಳಲ್ಲಿ ಈಗಾಗಲೇ ಇಂಥ ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿದೆ. ಇಂತಹ ಸೇವೆಗಳನ್ನು ಒದಗಿಸುವ ಕೆಲವೇ ಕೆಲವು ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಪಾಡ್​ ಹೋಟೆಲ್​ ಸೌಲಭ್ಯವನ್ನು ನಿರ್ಮಿಸಲು ಸ್ಥಳ ಪರಿಶೀಲಿಸುತ್ತಿದ್ದೇವೆ. ಇದು ಸುಮಾರು 2 ರಿಂದ -3 ಸಾವಿರ ಚದರ ಅಡಿ ಸ್ಥಳದಲ್ಲಿ ಹೋಟೆಲ್​ ನಿಮಾರ್ಣವಾಗಲಿದೆ. ಇದಕ್ಕೆ 40 ರಿಂದ 50 ಲಕ್ಷ ರೂ. ವೆಚ್ಚವಾಗಲಿದೆ. 6 ಗಂಟೆಗಳ ಕಾಲ ವಾಸ್ತವ್ಯಕ್ಕೆ ಸುಮಾರು 300 ರಿಂದ 400 ರೂ ಶುಲ್ಕ ವಿಧಿಸಲಾಗುತ್ತದೆ ಎಂದರು.

ಮೊದಲು ಕೊಂಕಣ ರೈಲ್ವೆಯ ಮಡಗಾಂವ್​ ರೈಲು ನಿಲ್ದಾಣದಲ್ಲಿ ವಿಮಾನ ನಿಲ್ದಾಣ ಮಾದರಿಯ ಲಾಂಜ್​ ಸೌಲಭ್ಯವನ್ನು ನಿಮಾರ್ಣ ಮಾಡಿದ್ದೇವೆ. ವಿಶ್ವ ದರ್ಜೆಯ ಸೌಲಭ್ಯ ಹೊಂದಿದ್ದು, ಪ್ರಯಾಣಿಕರ ಸ್ನೇಹಿಯಾಗಿದೆ. ಅದೇ ಮಾದರಿಯಲ್ಲಿ ಉಡುಪಿಯಲ್ಲೂ ಎಕ್ಸಿಕ್ಯೂಟಿವ್​ ಲಾಂಜ್​ ಆರಂಭಿಸಲಾಗುವುದು. ಎಕ್ಸಿಕ್ಯೂಟಿವ್​ ಲಾಂಜ್​ನಲ್ಲಿ ಆರಾಮದಾಯಕ ಸೋಫಾಗಳು, ಟಿವಿ, ಆಮ್​ರ್ರೆಸ್ಟ್​ ಕುರ್ಚಿಗಳು, ಮಸಾಜ್​ ಪಾರ್ಲರ್​, ಮಾಹಿತಿ ಫಲಕ, ಪ್ಯಾಂಟ್ರಿ, ವೈಫ್​-ಫೈ ಸೇವೆ ಲಭ್ಯವಿರಲಿದೆ. ಪ್ರಸ್ತುತ ಮಡಗಾಂವ್​ ನಿಲ್ದಾಣದಲ್ಲಿ ಎರಡು ಗಂಟೆಗೆ 50 ರೂ ದರ ನಿಗದಿ ಮಾಡಿದ್ದೇವೆ ಎಂದರು.

ಮಂಗಳೂರು-ಮಡಗಾಂವ್​ ಮಾರ್ಗಕ್ಕೆ ವಂದೇ ಭಾರತ್​ ರೈಲು ಸಿಗುವ ನಿರೀಕ್ಷೆಯಲ್ಲಿದ್ದೇವೆ. ಕೊಂಕಣ ರೈಲ್ವೇ ದ್ವಿಗುಣಗೊಳಿಸುವ ಕುರಿತು ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ. ಇದು ಪರಿಗಣನೆಯಲ್ಲಿದೆ. ಕೊಂಕಣ ರೈಲ್ವೆಯ ವಿದ್ಯುದಿಕರಣ ಪೂರ್ಣಗೊಂಡಿದೆ. ಶೇ. 70ರಷ್ಟು ರೈಲುಗಳು ಎಲೆಕ್ಟ್ರಿಕ್​ ಲೊಕೊದಲ್ಲಿ ಚಲಿಸುತ್ತಿವೆ. ಉಡುಪಿ ಮತ್ತು ತೋಕೂರಿನಲ್ಲಿ ಮುಂದಿನ ಮೂರು ತಿಂಗಳಲ್ಲಿ ಹೊಸ ಬೃಹತ್​ ಗೋದಾಮು ನಿರ್ಮಿಸಲಾಗುವುದು ಎಂದು ಹೇಳಿದರು.

ಕೊಂಕಣ ರೈಲ್ವೇಸ್​ ಕಾರವಾರದ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಬಿ.ಬಿ ನಿಕಮ್​, ಕಮರ್ಷಿಯಲ್​ ಮ್ಯಾನೇಜರ್​ ಆರ್​.ಡಿ. ಗೊಲಾಬ್​, ಅಧಿಕಾರಿಗಳಾದ ವಿನಯಕುಮಾರ್​, ಶಶಿಧರ್​, ಪಿಅರ್​ಒ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.