ಜಿಲ್ಲೆ

ಕಾಲೇಜಿನ ಉನ್ನತೀಕರಣಕ್ಕೆ ಸಂಪೂರ್ಣ ಸಹಕಾರ: ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಶಿಕ್ಷಣ ಕ್ಷೇತ್ರ ಬೆಳವಣಿಗೆ ಸಾಧಿಸಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಮಹಿಳಾ ಸರ್ಕಾರಿ ಕಾಲೇಜಿನ ಉನ್ನತೀಕರಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನ ವನರಂಗದಲ್ಲಿ ಯುವ ಅನ್‌ಸ್ಟಾಪೆಬಲ್ ಕಂಪನಿ ಮತ್ತು ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಿದ್ದ ನ್ಯೂ ಲುಕ್ ಕ್ಯಾಂಪಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆಯಲ್ಲಿ ಮೂಲ ಸೌಕರ್ಯಗಳು ಇರಬೇಕು. ಪ್ರಯೋಗಾಲಯ, ಶೌಚಗೃಹ, ಗ್ರಂಥಾಲಯ ಸೇರಿದಂತೆ ಸೌಕರ್ಯಗಳು ಉತ್ತಮವಾಗಿದ್ದು, ಕಲಿಕೆಗೆ ಪೂರಕ ವಾತಾವರಣವಿರಬೇಕು. ಆಗ ವಿದ್ಯಾರ್ಥಿಗಳ ಕಲಿಕೆಯೂ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕುಲಪತಿ ನಿಸಾರ್ ಅಹಮದ್ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಯನ್ನು ಸಲ್ಲಿಸುತ್ತಿದ್ದಾರೆ. ಅವರಿಗೆ ನಾನು ಯಾವ ಕೆಲಸವನ್ನು ಮಾಡಿಕೊಟ್ಟಿಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಕಾಲೇಜಿಗೆ ಒಳ್ಳೆಯ ಕೆಲಸವನ್ನು ಮಾಡಿ ಕೊಡಬೇಕೆಂಬ ಆಸೆಯಿಂದ ಇಲ್ಲಿಗೆ ಬಂದಿದ್ದಾರೆ. ಅದರಂತೆ ವಿದ್ಯಾರ್ಥಿಗಳ ಬೆಳವಣಿಗೆಗೆ ಹಾಗೂ ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ನಾವು ಪಕ್ಷಾತೀತವಾಗಿ ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.

ಈ ಕಾಲೇಜಿಗೆ ಬಿಸಿಯೂಟ ಕೊಡಿಸುವ ಚರ್ಚೆ ನಡೆಸಲಾಗಿದೆ. ಸಂಸ್ಥೆಯು ಸ್ವಾಯತ್ತತೆಯನ್ನು ಪಡೆದುಕೊಂಡಿದೆ. ಉಳಿದಂತೆ ಕೋರ್ಸ್‌ಗಳನ್ನು ತರುವು ಕೆಲಸವನ್ನು ಮಾಡುವುದರ ಜತೆಗೆ ಕಾಲೇಜಿಗೆ ಉನ್ನತ ಸಹಕಾರ ನೀಡಲು ನಾವೆಲ್ಲರೂ ಬದ್ಧರಾಗಿದ್ದೇವೆ. ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಲ್ಯಾಪ್‌ಟಾಪ್ ಬದಲು ಡಿವೈಸ್‌ಗಳನ್ನು ನೀಡುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ದಾನಕ್ಕೆ ದಾನವೇ ಸಮವಾಗಿದೆ. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಎಂಬ ಪಕ್ಷಬೇಧವಿಲ್ಲ. ದಾನ ಮಾಡಿದವರನ್ನು ನಾವು ಎಂದಿಗೂ ಮರೆಯಬಾರದು. ಕಾಲೇಜಿಗೆ ದಾನ ಮಾಡಿದ ಕಂಪನಿಯವರಿಗೆ ಧನ್ಯವಾದಗಳನ್ನು ತಿಳಿಸುವುದೇ ನಮ್ಮ ಕರ್ತವ್ಯವಾಗುತ್ತದೆ. ಜತೆಗೆ ಅಶ್ವತ್ಥನಾರಾಯಣ ಅವರು ಅಧಿಕಾರದ ಅವಧಿಯಲ್ಲಿ ತವರು ಜಿಲ್ಲೆ ಮಂಡ್ಯಕ್ಕೆ ದಾನಿಗಳಿಂದ ಕಾಲೇಜಿಗೆ ಸೌಲಭ್ಯ ಕೊಡಿಸಿದ್ದನ್ನು ಅಭಿನಂದಿಸುತ್ತೇನೆ ಎಂದು ಶ್ಲಾಸಿದರು.

ಬೆಂಗಳೂರಿನ ಪ್ರೆಸಿಡೆನ್ಸಿ ಯುನಿವರ್ಸಿಟಿಯ ಕುಲಪತಿ ನಿಸಾರ್ ಅಹಮದ್, ಉಪಾಧ್ಯಕ್ಷ ಸಲ್ಮಾನ್ ಅಹಮದ್, ಅಹಮದಾಬಾದ್‌ನ ಯುವ ಅನ್‌ಸ್ಟಾಪೆಬಲ್ ಕಂಪನಿಯ ಪಾರ್ಥ, ಪ್ರಾಂಶುಪಾಲ ಪ್ರೊ.ಆರ್.ದಶರಥ ಇತರರಿದ್ದರು.