ಮಂಗಳೂರು: ಆಧುನಿಕ ಜೀವನ ಪದ್ದತಿ ಅನುಸರಿಸುತ್ತಿರುವ ಮನುಷ್ಯನಿಗೆ ಆರೋಗ್ಯವಂತ ಜೀವನ ಈ ಕಾಲಘಟ್ಟದಲ್ಲಿ ಬಹುಮುಖ್ಯ. ಆರೋಗ್ಯವೇ ಜೀವನದ ಪ್ರಮುಖ ಸಂಪತ್ತಾಗಿದ್ದು, ಪ್ರತಿಯೊಬ್ಬ ನಾಗರಿಕರು ಮುಂಜಾಗ್ರತೆ, ಸ್ವಚ್ಛತೆ ಕಾಪಾಡಿ ಆರೋಗ್ಯವಂತ ಸಮಾಜ ನಿರ್ಮಿಸಲು ಪ್ರಯತ್ನಿಸಬೇಕು ಎಂದು ಎಂದು ಶ್ರೀ ಪರಂ ಜ್ಯೋತಿ ಭಜನಾ ಮಂದಿರ ಇದರ ಅಧ್ಯಕ್ಷ ವಕೀಲ ದಿನಕರ್ ಶೆಟ್ಟಿ ಹೇಳಿದರು.
ಯುವವಾಹಿನಿ ಕಂಕನಾಡಿ ಘಟಕ, ಜಿ.ಆರ್. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನೀರುಮಾರ್ಗ ಇವರ ಜಂಟಿ ಆಶ್ರಯದಲ್ಲಿ ಭಾನುವಾರ ಉಜ್ಜೋಡಿ ಕಂಕನಾಡಿಯ ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಕಂಕನಾಡಿ ಘಟಕ ಹಾಗೂ ಜಿ.ಆರ್. ಮೆಡಿಕಲ್ ಕಾಲೇಜು ಕಾಲೇಜು ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಉಚಿತ ವೈದ್ಯಕೀಯ ಶಿಬಿರದ ಆಯೋಜಿಸಿದ್ದು, ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು, ಇಂದು ಇಡೀ ಜಗತ್ತೇ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುತ್ತಿದೆ. ಆರೋಗ್ಯ ಸೂತ್ರವನ್ನು ನಾವೆಲ್ಲ ಪಾಲಿಸಬೇಕು. ಜನ ತಮ್ಮ ದೈನಂದಿನ ಜಂಜಾಟದ ಬದುಕಿನಲ್ಲಿ ಆರೋಗ್ಯದ ಕಡೆ ಗಮನ ಹರಿಸಲೂ ಸಮಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯದ ಬಗ್ಗೆ ಎಚ್ಚರವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷ ಲೋಕೇಶ್ ಅಮೀನ್, ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಪೂಜಾರಿ, , ಜಿ.ಆರ್. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಡೆಂಟಲ್ ವಿಭಾಗದ ಡಾ. ಜಾನ್ಸಿ ರಾಣಿ ಹಾಗೂ ಇಎನ್‌ಟಿ ವಿಭಾಗ ಡಾ. ಆಧ್ಯಶಾ, ಮಂಗಳೂರು ಘಟಕದ ಮಾಜಿ ಅಧ್ಯಕ್ಷ ಡಾ. ರಾಕೇಶ್, ವಿದ್ಯಾ ರಾಕೇಶ್, ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸ್ವಸ್ತಿಕ್ ಶಾಖೆಯ ಅಧ್ಯಕ್ಷ ವಕೀಲ ದಿನೇಶ್ ಶೆಟ್ಟಿ ಸಹಿತ ಹಲವರು ಉಪಸ್ಥಿತರಿದ್ದರು.
ಸಾಮಾನ್ಯ ತಪಾಸಣೆಯಿಂದ ಹಿಡಿದು ಕಿವಿಮೂಗು, ಗಂಟಲು, ಸ್ತ್ರೀ ರೋಗ, ಚರ್ಮರೋಗ, ಕಣ್ಣಿನ ರೋಗ, ಮಕ್ಕಳ ರೋಗ, ಮಧುಮೇಹ, ಎಲುಬು ರೋಗ ವಿಶೇಷ ತಜ್ಞರು ಭಾಗವಹಿಸಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಂಡರು. ಆರೋಗ್ಯ ನಿರ್ದೇಶಕ ಯಶ್ವಿತ್ ಸಾಲಿಯಾನ್ ವಂದಿಸಿದರು. ಭವಿತ್ ರಾಜ್ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯದ ಬಗ್ಗೆ ಜಾಗೃತಿ ವಹಿಸಿದ್ದರೆ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ. ಆರೋಗ್ಯವಿದ್ದರೆ ನಾವು ಬದುಕಿನಲ್ಲಿ ಏನನ್ನೂ ಸಾಧಿಸಬಹುದು. ಕೋವಿಡ್ ಬಳಿಕ ನಾವು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದೇವೆ. ಸರ್ಕಾರ, ವಿವಿಧ ಸಂಘ ಸಂಸ್ಥೆಗಳು ಜನರ ಆರೋಗ್ಯ ರಕ್ಷಣೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಸಂಪೂರ್ಣ ಪ್ರಯೋಜನ ಸಾರ್ವಜನಿಕರು ಪಡೆದುಕೊಂಡಾಗ ಮಾತ್ರ ಆರೋಗ್ಯ ಶಿಬಿರಗಳು ಯಶಸ್ವಿಯಾಗಲು ಸಾಧ್ಯ.
ಪ್ರವೀಣ್ ಚಂದ್ರ ಆಳ್ವ, ಪ್ರತಿಪಕ್ಷದ ನಾಯಕ, ಮಂಗಳೂರು ಮಹಾನಗರ ಪಾಲಿಕೆ