ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಕೇಂದ್ರದ ಉನ್ನತ ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ನೀತಾ ಪ್ರಸಾದ್ ತಿಳಿಸಿದರು.
ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್)ದಲ್ಲಿ ಭಾನುವಾರ ಆಯೋಜಿಸಿದ್ದ ಸಿಐಐಎಲ್‌ನ 54ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ವರ್ಚುವಲ್ ವೇದಿಕೆಯಲ್ಲಿ ಮಾತನಾಡಿದರು.
ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಬಹಳಷ್ಟು ಕೆಲಸಗಳು ನಡೆದಿವೆ. ಪ್ರತಿ ರಾಜ್ಯದ ಸಂಸ್ಕೃತಿಯನ್ನು ಪರಸ್ಪರ ಪರಿಚಯಿಸುವುದು ಮತ್ತು ಅವುಗಳ ನಡುವೆ ಸಂಬಂಧ ಸುಧಾರಿಸಲಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಆಗಿದೆ ಎಂದರು.
ಭಾಷೆಗಳ ಮೂಲಕ ದೇಶದ ಏಕತೆ ಸಮಗ್ರತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಪ್ರಾದೇಶಿಕ ಭಾಷೆಗಳ ಕೇಂದ್ರಗಳನ್ನು ಬಲಪಡಿಸಲು ಚಿಂತಿಸಲಾಗಿದೆ. ಸಂಸ್ಕೃತ ಸೇರಿದಂತೆ ದೇಶದ ಎಲ್ಲ ಭಾಷೆಗಳ ವಿಕಾಸಕ್ಕೂ ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಸಿಐಐಎಲ್‌ನಂತಹ ಸಂಸ್ಥೆಗಳನ್ನು ಸಶಕ್ತಗೊಳಿಸಲಾಗುತ್ತದೆ ಎಂದರು.
ಸಿಐಐಎಲ್ ಸಂಸ್ಥಾಪಕ ನಿರ್ದೇಶಕ ಪ್ರೊ.ಡಿ.ಪಿ.ಪಟ್ಟನಾಯಕ ಮಾತನಾಡಿ, ಸಿಐಐಎಲ್ ಬೆಳೆದು ಬಂದ ಹಾದಿಯನ್ನು ನೆನೆದರು. ಭಾಷಾ ವಿಜ್ಞಾನದ ಬೆಳವಣಿಗೆಯ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಏಜೆನ್ಸಿಗಳಿಗೆ ಮಾನವ ಸಂಪನ್ಮೂಲ ಒದಗಿಸುವ ಮಹತ್ವದ ಕೆಲಸವನ್ನು ಸಿಐಐಎಲ್ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕೇಂದ್ರವು ಸಿಐಇಎಫ್‌ಎಲ್ ಹಾಗೂ ಹಲವು ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯಗಳನ್ನು ರೂಪಿಸಿದೆ. ಅಂತೆಯೆ, ಸಿಐಐಎಲ್ ಅನ್ನೂ ಪರಿಗಣಿಸಬೇಕು. ಭಾರತದ ಯಾವುದೇ ವಿಶ್ವವಿದ್ಯಾಲಯಗಳಲ್ಲೂ ಮುಂಡಾ ಮತ್ತು ಸಿನೋ ಟಿಬೆಟಿಯನ್ ಭಾಷಾವಿಜ್ಞಾನದ ಅಧ್ಯಯನ ಕೇಂದ್ರವಿಲ್ಲ. ಇಂಡೋ ಆರ್ಯನ್ ಹಾಗೂ ದ್ರಾವಿಡಿಯನ್ ಭಾಷೆಗಳಿಗೂ ಕೇಂದ್ರಗಳಿಲ್ಲ. ಸಿಐಐಎಲ್ ಅನ್ನು ಇಲಾಖೆಯಾಗಿ ಉಳಿಸಿಕೊಳ್ಳಲು ಕೇಂದ್ರಕ್ಕೆ ಇಷ್ಟವಿಲ್ಲದಿದ್ದರೆ, ಪರ್ಯಾಯಗಳೂ ಇವೆ. ರಾಷ್ಟ್ರೀಯ ಮಾನ್ಯತೆಯ ಕೇಂದ್ರವನ್ನಾಗಿಸುವುದು ಪರ್ಯಾಯಗಳಲ್ಲಿ ಒಂದಾಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸಬೇಕು ಎಂದರು.
ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಮಾತನಾಡಿ, ಸಿಐಐಎಲ್ ಸಂಸ್ಥೆಯಿಂದ ವಿವಿಧೆಡೆ 7 ಪ್ರಾದೇಶಿಕ ಭಾಷಾ ಕೇಂದ್ರಗಳನ್ನು ಸ್ಥಾಪಿಸಿ, ದೇಶದ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ತ್ರಿಭಾಷಾ ಸೂತ್ರದ ಮೂಲಕ ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ಸಮನ್ವಯದ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಎನ್‌ಇಪಿ ಅನುಷ್ಠಾನ ಹಾಗೂ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಭಾಷಾ ಕಲಿಕೆ ಕೋರ್ಸ್‌ಗಳನ್ನು ಮರು ರೂಪಿಸುವ ಅಗತ್ಯವಿದೆ. ಸಂಸ್ಥೆಯು ಭಾರತೀಯ ಭಾಷಾ ಸಂಗಮದ ಹೆಸರಿನಲ್ಲಿ ಭಾರತೀಯ ಭಾಷೆಗಳ ಭಂಡಾರ ರೂಪಿಸುವ ಯೋಜನೆ ಹಾಕಿಕೊಂಡಿದೆ. ಅದರಲ್ಲಿ 160 ಭಾಷೆಗಳಿಗೆ ಸಂಬಂಧಿಸಿದ ಕ್ಷೇತ್ರ ಕಾರ್ಯದ ದತ್ತಾಂಶವಿರಲಿದೆ. ಅಪಾರ ಪುಸ್ತಕಗಳ ನಿಧಿಯನ್ನು ಒಳಗೊಂಡಿರಲಿದೆ ಎಂದರು. ಭಾಷಾತಜ್ಞ ಚಾಮಕೃಷ್ಣ ಶಾಸ್ತ್ರಿ, ಪ್ರೊ.ಅವದೇಶ್‌ಕುಮಾರ್ ಮಿಶ್ರಾ, ಪ್ರೊ.ರಾಜೇಶ್ ಸಚ್‌ದೇವ್ ಇದ್ದರು.