ಜಿಲ್ಲೆ

ಆಧಾರ್ ಕಾರ್ಡ್ ನೋಂದಣಿಗೆ ಚಾಲನೆ

ಲಲಾಟಾಕ್ಷ ಎಸ್

ಹನೂರು: ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆರೆದಿರುವ ಆಧಾರ್ ಸೇವಾ ಕೇಂದ್ರದಲ್ಲಿ ಮಕ್ಕಳ ಆಧಾರ್ ಕಾರ್ಡ್‌ನಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬಹುದು. ಆದ್ದರಿಂದ ಪಾಲಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ತಿಳಿಸಿದರು.


ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ಹನೂರು ಶೈಕ್ಷಣಿಕ ವಲಯದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ನಲ್ಲಿ ಕೆಲವು ಲೋಪದೋಷಗಳಿದ್ದು, ದಾಖಲಾತಿ ಹಾಗೂ ಕೆಲವು ಶೈಕ್ಷಣಿಕ ಪ್ರಕ್ರಿಯೆಗಳಿಗೆ ಸಮಸ್ಯೆಯಾಗಿತ್ತು. ಇದರಿಂದ ತಿದ್ದುಪಡಿ ಅಗತ್ಯವಿತ್ತು. ಹಾಗಾಗಿ ಪಾಲಕರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಕೇಂದ್ರವನ್ನು ತೆರೆಯಲಾಗಿದೆ. ಆದ್ದರಿಂದ ಪಾಲಕರು ಮಕ್ಕಳೊಡನೆ ಆಗಮಿಸಿ ಅಗತ್ಯ ದಾಖಲೆ ನೀಡುವುದರ ಮೂಲಕ ಅವರ ಆಧಾರ್ ಕಾರ್ಡ್‌ನಲ್ಲಿನ ನ್ಯೂನತೆ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಹಾಗೆಯೇ ಹೊಸ ಆಧಾರ್ ಕಾರ್ಡ್ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬಿಆರ್‌ಸಿ ದಿನೇಶ್ ಹಾಗೂ ಇತರರಿದ್ದರು.