ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಕಿಡಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಸವಲತ್ತುಗಳನ್ನು ಹೊಂದಿರುವ ಜಯದೇವ ಹೃದ್ರೋಗ ವಿಜ್ಞಾನಗಳ ಹಾಗೂ ಸಂಶೋಧನಾ ಸಂಸ್ಥೆಯನ್ನು ಉದ್ಘಾಟನೆ ಮಾಡಿ ಜನರ ಸೇವೆಗೆ ಸಮರ್ಪಿಸಲು ವಿಳಂಬ ಮಾಡುತ್ತಿರುವುದಕ್ಕೆ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರವು ಜಯದೇವ ಆಸ್ಪತ್ರೆ ನಿರ್ಮಿಸಲು ಇಲ್ಲಿನ ಮುಖ್ಯರಸ್ತೆಯಲ್ಲಿನ ಹಳೆಯ ಆಸ್ಪತ್ರೆ (ಡಿಎಚ್‌ಒ) ಕಚೇರಿಯ ಜಾಗವನ್ನು ಹಸ್ತಾಂತರ ಮಾಡಿ, ನಿರ್ಮಾಣ ಕಾಮಗಾರಿ ಆರಂಭಿಸಿತು. ಆಗಲೇ ಉದ್ಘಾಟನೆಯಾಗಬೇಕಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದರೂ ಇನ್ನೂ ಉದ್ಘಾಟನೆ ಮಾಡುವುದಾಗಿಯೇ ಹೇಳುತ್ತಿದ್ದಾರೆ ಹೊರತು, ಆ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ, ಆದರೂ, ಜನಾರ್ಪಣೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಜಿಮ್ಸ್ ಕಟ್ಟಡದಲ್ಲಿರುವ ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳಗೊಂಡಿದೆ. ಇದರಿಂದಾಗಿ ಒತ್ತಡದ ಜತೆಗೆ ರಶ್ ಆಗಿದ್ದರಿಂದ ಸ್ಥಳ ಸಾಕಾಗುತ್ತಿಲ್ಲ. ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅದನ್ನು ತಪ್ಪಿಸಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಾ.ಪಾಟೀಲ್‌ರು ಆಗ್ರಹಿಸಿದ್ದಾರೆ.
ಕಟ್ಟಡವನ್ನು ಸಚಿವರು ಹಲವಾರು ಸಲ ಭೇಟಿ ನೀಡಿ ಪರಿಶೀಲನೆ ನಡೆಸಿ, ಉದ್ಘಾಟನಾ ದಿನಾಂಕ ಘೋಷಣೆ ಮಾಡಿದರು.ಆದರೆ, ಉದ್ಘಾಟನೆ ಮಾತ್ರ ಆಗಲಿಲ್ಲ. ಮುಖ್ಯಮಂತ್ರಿಗಳು ದಿನಾಂಕ ನಿಗದಿಯಾಗಿದೆ ಎಂದು ಹೇಳುತ್ತಿದ್ದರು, ಯಾಕೆ ಇದುವರೆಗೂ ಸಿಎಂ ದಿನಾಂಕ ಕೊಡಲಿಲ್ಲವೇನು ? ಎಂದು ಪ್ರಶ್ನಿಸಿದ್ದಾರೆ. ಕಕ ಉತ್ಸವಕ್ಕೆ ಬಂದಾಗ ಲೋಕಾರ್ಪಣೆ ಮಾಡಿಸಲಾಗುತ್ತದೆ ಎಂದರು, ಅದು ಆಗಲಿಲ್ಲ ಎಂದು ಬಿ.ಜಿ.ಪಾಟೀಲ್‌ರು ಹೇಳಿದರು.
ಈ ಭಾಗದ ರೋಗಿಗಳ ಹಿತದೃಷ್ಟಿಯಿಂದ ಕೂಡಲೇ ಜಯದೇವ ಆಸ್ಪತ್ರೆ ಉದ್ಘಾಟನೆ ದಿನಾಂಕವನ್ನು ನಿಗದಿಪಡಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸುವೆ. ಅಲ್ಲದೆ ಬೆಳಗಾವಿ ಅಧಿವೇಶನದಲ್ಲಿಯೂ ಪ್ರಸ್ತಾಪಿಸಲಾಗುವುದು ಎಂದು ಪಾಟೀಲ್‌ರು ತಿಳಿಸಿದ್ದಾರೆ.
===