ಜಿಲ್ಲೆ

ಅಸಮರ್ಪಕ ಮೇಲ್ವಿಚಾರಣೆಯಿಂದ ಇ-ಖಾತೆ ಅಭಿಯಾನಕ್ಕೆ ತೊಡಕು

ಆರ್.ಕೃಷ್ಣ

ವಿಜಯವಾಣಿ ವಿಶೇಷ ಮೈಸೂರು

ಆಸ್ತಿ ದಾಖಲೆಗಳ ಡಿಜಿಟಲೈಜೇಷನ್ ಮಾಡುವ ಉದ್ದೇಶದಿಂದ ಕೈಗೊಂಡಿರುವ ಸರ್ಕಾರದ ಮಹತ್ವಾಕಾಂಕ್ಷೆಯ ಇ-ಖಾತೆ ಅಭಿಯಾನಕ್ಕೆ ತೊಡಕು ಎದುರಾಗುತ್ತಿದೆ.

ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಆಸ್ತಿ ನೋಂದಣಿಯನ್ನು ಡಿಜಿಟಲೈಜೇಷನ್ ಮಾಡಲು ಸರ್ಕಾರ ಆದೇಶಿಸಿದ್ದು, ಇ-ಖಾತೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇದರಂತೆ ಸಾವಿರಾರು ಜನರು ತಮ್ಮ ಆಸ್ತಿ ಇ-ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ.

ಆದರೆ ಮೇಲ್ವಿಚಾರಣೆ ಕೊರತೆ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳಾದ ನಗರಪಾಲಿಕೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಆಸ್ತಿಗಳಿಗೆ ಇ-ಖಾತೆ, ಬಿ-ಖಾತೆ ಮಾಡಿಕೊಡುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿದೆ. ಇದರಿಂದಾಗಿ ಸಾರ್ವಜನಿಕರು ಖಾತೆಗಾಗಿ ಕಚೇರಿಗಳಿಗೆ ಅಲೆಯುವಂತಾಗಿದೆ.

ಸಿಬ್ಬಂದಿ ಕೊರತೆಯಿಂದ ವಿಳಂಬ:

ಇ-ಖಾತೆಗಾಗಿ ಜನರು ಸಲ್ಲಿಸಿದ ಅರ್ಜಿಯ ಜತೆಗಿನ ದಾಖಲೆಗಳನ್ನು ಪರಿಶೀಲಿಸಿ ಅದನ್ನು ನಿಗದಿತ ನಮೂನೆಯಲ್ಲಿ ಅಪ್‌ಲೋಡ್ ಮಾಡಬೇಕು. ಅದಾಗಲೇ ಇರುವ ದಾಖಲೆಗಳನ್ನು ಪರಿಶೀಲಿಸಬೇಕು. ಅಲ್ಲದೆ ನೋಂದಣಿ ಆಗಿರುವ ದಾಖಲೆ ಇದ್ದು, ಬಡಾವಣೆ ನಿರ್ಮಾಣ ಮಾಡಿದವರ ಕೆಲವೊಂದು ದೋಷಗಳಿಂದ ಖಾತೆ ಮಾಡದೇ ತಡೆ ಹಿಡಿಯಲಾಗಿರುವ ಆಸ್ತಿಗಳಿಗೆ ಬಿ-ಖಾತೆ ಮಾಡಲು ಸರ್ಕಾರ ಅನುಮತಿ ನೀಡಿದೆ.

ಈ ಎರಡೂ ಸೇವೆಗಾಗಿ ಸಾವಿರಾರು ಜನ ನಾಗರಿಕರು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಮೂಲಸೌಲಭ್ಯ, ಸಿಬ್ಬಂದಿ ಕೊರತೆ, ಹಿರಿಯ ಅಧಿಕಾರಿಗಳಿಂದ ದಾಖಲೆ ಪರಿಶೀಲಿಸಿ ಅನುಮತಿ ನೀಡುವ ಮೇಲ್ವಿಚಾರಣೆ ಮಾಡದಿರುವುದು ಸೇರಿದಂತೆ ನಾನಾ ಕಾರಣಗಳಿಗೆ ಇ-ಖಾತೆ, ಬಿ-ಖಾತೆ ಮಾಡಿಸಿಕೊಳ್ಳಲು ತೊಡಕಾಗುತ್ತಿದೆ.

ನಗರಪಾಲಿಕೆ ವ್ಯಾಪ್ತಿಯಲ್ಲಿ ಶೇ.80ರಷ್ಟು ಖಾತೆ ಮಾಡುವ ಜವಾಬ್ದಾರಿಯನ್ನು ಆಯಾ ವಲಯ ಕಚೇರಿಗಳಿಗೆ ನೀಡಲಾಗಿದೆ. ಮುಡಾ ವ್ಯಾಪ್ತಿಯಲ್ಲಿದ್ದ ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದ್ದು, ಇ-ಖಾತೆ, ಬಿ-ಖಾತೆ ಮಾಡುವ ಜವಾಬ್ದಾರಿಯನ್ನು ಪಾಲಿಕೆ ವಲಯ ಕಚೇರಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಚೇರಿಗಳಿಗೆ ವಹಿಸಲಾಗಿದೆ.

ಸರ್ವರ್ ಸಮಸ್ಯೆ ತಲೆನೋವು:

ಸಿಬ್ಬಂದಿ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ಸರ್ವರ್ ಸಮಸ್ಯೆ ತಲೆನೋವಾಗಿದೆ. ಇ-ಖಾತೆ ಅಭಿಯಾನ ಇಡೀ ರಾಜ್ಯದಲ್ಲಿ ಏಕಕಾಲಕ್ಕೆ ನಡೆಯುತ್ತಿರುವುದರಿಂದ ಎಲ್ಲೆಡೆಯಿಂದ ಅಪ್‌ಲೋಡ್ ನಡೆಯುವುದರಿಂದ ಸರ್ವರ್ ಸಮಸ್ಯೆ ಕಾಡುತ್ತಿದೆ.

ಹೀಗಾಗಿ ಜನರು ದಿನಗಟ್ಟಲೇ ಕಾಯ್ದುಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇ-ಖಾತೆಗಾಗಿ ಬರುವ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರು ಇಲ್ಲ. ಒಂದೊಂದು ಕೇಂದ್ರದಲ್ಲಿ ಕಂದಾಯ ನಿರೀಕ್ಷಕರು (ರೆವಿನ್ಯೂ ಇನ್ಸ್‌ಪೆಕ್ಟರ್) ಒಬ್ಬರೇ ಇರುತ್ತಾರೆ. ಎರಡರಿಂದ ಮೂರು ಪಂಚಾಯಿತಿಗೆ ಒಬ್ಬ ಎಂಜಿನಿಯರ್ ಇದ್ದಾರೆ. ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಹತ್ತಾರು ಬಾರಿ ಅಲೆದರೂ ಕೆಲಸವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ನಾಗರಿಕರಿಗೆ ಇ-ಖಾತೆ, ಬಿ-ಖಾತೆ ನೀಡುವುದು ಒಂದು ಪ್ರಮುಖ ಸೇವೆಯಾಗಿದೆ. ಇದನ್ನು ಜಾರಿಗೊಳಿಸಲು ಸೂಕ್ತ ವ್ಯವಸ್ಥೆಗಳಿವೆಯೇ? ಅಗತ್ಯ ಸಿಬ್ಬಂದಿ ಇದ್ದಾರೆಯೇ? ಮೂಲಸೌಲಭ್ಯ, ಸಕಾಲಕ್ಕೆ ಸೇವೆ ನೀಡಲಾಗುತ್ತಿದೆಯೇ? ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಇದೆಯೇ ಎಂಬುದನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿ ಮೇಲ್ವಿಚಾರಣೆ ಮಾಡಬೇಕಿದೆ.

ಆದರೆ ಕಾರ್ಯಭಾರದ ಒತ್ತಡ, ಕೆಲವು ಅಧಿಕಾರಿಗಳ ನಿರ್ಲಕ್ಷೃದಿಂದ ಖಾತೆ ಮಾಡಿಕೊಡುವ ವಲಯ ಕಚೇರಿಗಳು ಅವ್ಯವಸ್ಥೆಯ ಆಗರವಾಗಿದೆ.

ಅರ್ಜಿದಾರರೇ ದಾಖಲೆ ನೀಡಬೇಕು:

ಮುಡಾದಿಂದ ಬಡಾವಣೆಗಳನ್ನು ನಿರ್ಮಿಸಿ ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗೆ ವಹಿಸಲಾಗಿದೆ. ವರ್ಗಾವಣೆ ಕೇವಲ ಕೆಲವು ದಾಖಲೆ ಪತ್ರಗಳ ಹಸ್ತಾಂತರ ಮಾತ್ರ ಅಗಿದ್ದು, ಇನ್ನು ಸಾಕಷ್ಟು ದಾಖಲೆಗಳು ಹಸ್ತಾಂತರಗೊಳ್ಳಬೇಕಿದೆ. ಹೀಗಾಗಿ ಸಂಬಂಧಿಸಿದ ದಾಖಲೆಗಳನ್ನು ಅರ್ಜಿದಾರರರೇ ಸ್ಥಳೀಯ ಸಂಸ್ಥೆಗಳಿಗೆ ಒದಗಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಜತೆಗೆ ಹಸ್ತಾಂತರಗೊಂಡ ದಾಖಲೆಗಳನ್ನು ಪರಿಶೀಲಿಸಿ ಅವುಗಳನ್ನು ತಾಳೆ ನೋಡುವ ವ್ಯವಧಾನವೂ ಸಿಬ್ಬಂದಿ, ಅಧಿಕಾರಿಗಳಲ್ಲಿ ಇಲ್ಲ. ಹಾಗಾಗಿ ಆಸ್ತಿಗೆ ಸಂಬಂಧಿಸಿದ ಸಿ.ಡಿ. ವರದಿ, ಲೇಔಟ್ ಪ್ಲಾೃನ್ ಸೇರಿದಂತೆ ಕೆಲವು ದಾಖಲೆಗಳನ್ನು ಅರ್ಜಿದಾರರ ಬಳಿ ಕೇಳಲಾಗುತ್ತಿದೆ.

ಕಾರ್ಯಭಾರ ಹೆಚ್ಚಾಗಿದೆ

ಇ-ಖಾತೆ ಅಭಿಯಾನ ಎಲ್ಲೆಡೆ ನಡೆಯುತ್ತಿರುವುದರಿಂದ ಏಕಕಾಲಕ್ಕೆ ಜನರು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗಳನ್ನು ಪರಿಶೀಲಿಸಿ ಮೂಲ ದಾಖಲೆಗಳೊಂದಿಗೆ ತಾಳೆ ಹಾಕಬೇಕಿದೆ. ಜತೆಗೆ ಮುಡಾದಿಂದ ಬಡಾವಣೆಗಳು ಹಸ್ತಾಂತರಗೊಂಡಿರುವುದರಿಂದ ಅವುಗಳನ್ನು ಗಮನಿಸಬೇಕಿದೆ. ಏಕಾದರೂ ಕೊಂಚ ಮೈಮರೆತರೂ ಅರ್ಜಿದಾರರು ಮುಂದೆ ತೊಂದರೆಪಡಬೇಕಿದೆ. ಸಿಬ್ಬಂದಿ, ಕೊರತೆ, ಸರ್ವರ್ ಸಮಸ್ಯೆ ಒಂದೆಡೆಯಾದರೆ ರಾಜಕಾರಣಿಗಳ ಒತ್ತಡ ಮತ್ತೊಂದೆಡೆ. ಹೀಗಾಗಿ ಕಾರ್ಯಭಾರದ ಒತ್ತಡ ಹೆಚ್ಚಾಗಿ ಹೆಚ್ಚು ಗಮನ ನೀಡಲು ಅಗುತ್ತಿಲ್ಲ.

ಹೆಸರು ಹೇಳಲಿಚ್ಛಿಸದ ಅಧಿಕಾರಿ