ಜಿಲ್ಲೆ

ಅಸಮರ್ಪಕ ಮಳೆ, ಬಿತ್ತನೆ ಗುರಿ ಸಾಧನೆಯಲ್ಲಿ ಹಿನ್ನಡೆ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಇಲ್ಲಿಯವರೆಗೆ ಶೇ.೫೯.೩೫ ರಷ್ಟು ಬಿತ್ತನೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ೧,೩೨,೭೯೬ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಹೊಂದಿದ್ದು ಇಲ್ಲಿಯವರೆಗೂ ೭೮೮೧೯.೫ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಈ ಭಾಗದಲ್ಲಿ ವಾಡಿಕೆ ಪ್ರಮಾಣಕ್ಕಿಂತಲೂ ಉತ್ತಮ ಮಳೆ ಸುರಿದಿದೆ. ಆದರೆ, ಇದು ಸಕಾಲಕ್ಕಾಗಿಲ್ಲ. ಇದರ ಅಸರ್ಮಪಕತೆಯಲ್ಲಿ ಮುಂಗಾರಿನಲ್ಲಿ ಇಲ್ಲಿಯವರೆಗೂ ನಿರೀಕ್ಷೆಗೆ ಅನುಗುಣವಾಗಿ ಸಾಧನೆ ಕಂಡು ಬಂದಿಲ್ಲ. ಪ್ರಸ್ತುತ ಶೇ.೭೦ ಕ್ಕಿಂತಲೂ ಬಿತ್ತನೆಯಾಗಬೇಕಾಗಿತ್ತು ಎಂಬ ಮಾತು ಕೇಳಿ ಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ ಹೆಚ್ಚಿಗೆ ಜಡಿ ಮಳೆ ಬೀಳುತ್ತಿದೆ. ಬಹುತೇಕ ಅವಧಿ ಮೋಡ ಮುಸುಕಿದ ವಾತಾವರಣ ಇದೆ. ಇದರ ನಡುವೆ ಮುಂಬರುವ ದಿನಗಳಲ್ಲಿ ಮಳೆಗೆ ಬಿತ್ತನೆ ಪ್ರಕ್ರಿಯೆ ಏರುಗತಿಯಲ್ಲಿ ಸಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಇನ್ನೂ ಹವಾಮಾನ ಇಲಾಖೆಯು ನಾಲ್ಕೈದು ದಿನ ನಿರಂತರ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಯ ಬಗ್ಗೆ ವರದಿ ನೀಡಿದೆ.

*ಇಳಿಮುಖ ಸಾಧನೆ
ವಿವಿಧ ಬೆಳೆಗಳ ಬಿತ್ತನೆ ಪ್ರಕ್ರಿಯೆ ಸಾಧನೆಯಲ್ಲಿ ಇಳಿಮುಖ ಕಂಡು ಬಂದಿದೆ. ಈಗಾಗಲೇ ನೆಲಗಡಲೆ ಬಿತ್ತನೆ ಅವಧಿ ಮುಕ್ತಾಯಗೊಂಡಿದೆ. ಆದರೆ, ಇಲ್ಲಿಯವರೆಗೆ ೨೦ ಸಾವಿರ ಹೆಕ್ಟೇರ್‌ ಪ್ರದೇಶ ಪೈಕಿ ಕೇವಲ ೫೨೯೨ ಪ್ರದೇಶದಲ್ಲಿ (ಶೇ.೨೬.೪೬) ಬಿತ್ತನೆಯಾಗಿದೆ. ಹಾಗೆಯೇ ತೊಗರಿ ಬೆಳೆಗೆ ಸಂಬಂಧಿಸಿದಂತೆ ೪೨೦೦ ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿ ಪೈಕಿ ೧೮೪೯ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ, ಅಲಸಂಧೆಗೆ ಮಾತ್ರೆ ಉತ್ತಮ ಸ್ಪಂದನೆ ಸಿಕ್ಕಿದೆ. ೧೫೦ ಹೆಕ್ಟೇರ್‌ ಪ್ರದೇಶ ಪೈಕಿ ೧೫೫ ಹೆಕ್ಟೇರ್‌ ಬಿತ್ತನೆಯೊಂದಿಗೆ ಹೆಚ್ಚುವರಿ ಸಾಧನೆಯಾಗಿದೆ.

*ಮಳೆಯ ಪ್ರಮಾಣ
ಪ್ರಸಕ್ತ ಮುಂಗಾರು ಅವಧಿಯಲ್ಲಿ ಈ ಭಾಗದಲ್ಲಿ ವಾಡಿಕೆ ಪ್ರಮಾಣಕ್ಕಿಂತಲೂ ಉತ್ತಮ ಮಳೆಯಾಗಿದೆ. ಮೇನಲ್ಲಿ ೬೭ ಮಿ.ಮೀ ವಾಡಿಕೆ ಮಳೆಗೆ ೧೪೨.೬ ಮಿ.ಮೀ ಮಳೆ ಸುರಿದಿದೆ. ಜೂನ್‌ ನಲ್ಲಿ ೬೪.೧ ಮಿ.ಮೀ ವಾಡಿಕೆ ಮಳೆಗೆ ೪೬.೭ ಮಿ.ಮೀ ಬಿದ್ದಿದೆ.  ಜುಲೈನಲ್ಲಿ ೮೫.೫ ಮಿ.ಮೀ ವಾಡಿಕೆ ಮಳೆಗೆ ೫೩.೧ ಮಿ.ಮೀ, ಆಗಸ್ಟ್‌ ನಲ್ಲಿ ಇಲ್ಲಿಯವರೆಗೆ ೫೨.೭ ಮಿ.ಮೀ ಮಳೆಗೆ ೭೬.೫ ಮಿ.ಮೀ ಮಳೆ ಸುರಿದಿದೆ. ಕಳೆದ ೪ ತಿಂಗಳಲ್ಲಿ ೨ ತಿಂಗಳು ಮಳೆ ಕೊರತೆ ಕಂಡು ಬಂದಿದೆ. ವರುಣರಾಯ ವಾಡಿಕೆ ಲೆಕ್ಕಾಚಾರದಲ್ಲಿ ಕೃಪೆ ತೋರಿದರೂ ಸಕಾಲದಲ್ಲಿ ಮಾತ್ರ ಕೈ ಕೊಟ್ಟಿದ್ದಾನೆ.