ಜಿಲ್ಲೆ

ವಾಲಿಬಾಲ್‌ನಲ್ಲಿ ಮೂಡುಬಿದಿರೆ, ಮಂಗಳೂರು ದ್ವಿತೀಯ, ಸುಬ್ರಹ್ಮಣ್ಯದಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಟೂರ್ನಿ

Mangaluru - Shravan Kumar Nala

ಮಂಗಳೂರು: ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲ್ಪಟ್ಟ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ಬಾಲಕ-ಬಾಲಕಿಯರ ವಾಲಿಬಾಲ್ ಟೂರ್ನಿಯ ಎರಡೂ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕು ಪ್ರಥಮ ಸ್ಥಾನ ಪಡೆದಿದ್ದು, ಬಾಲಕರ ವಿಭಾಗದಲ್ಲಿ ಮೂಡುಬಿದಿರೆ ತಂಡ, ಬಾಲಕಿಯರ ವಿಭಾಗದಲ್ಲಿ ಮಂಗಳೂರು ತಂಡ ದ್ವಿತೀಯ ಸ್ಥಾನ ಪಡೆಯಿತು.

ಬಾಲಕರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಬೆಳ್ತಂಗಡಿ ತಾಲೂಕು ತಂಡ(ಎಸ್‌ಡಿಎಂ ಉಜಿರೆ) ಮೂಡುಬಿದಿರೆ ತಾಲೂಕು ತಂಡ(ಆಳ್ವಾಸ್ ಮೂಡುಬಿದಿರೆ)ವನ್ನು 25-14, 25-17 ನೇರ ಸೆಟ್‌ನಿಂದ ಸೋಲಿಸಿತು. ಬೆಳ್ತಂಗಡಿ ತಂಡ ಮಂಗಳೂರು ತಂಡವನ್ನು ಹಾಗೂ ಮೂಡುಬಿದಿರೆ ತಂಡ ಮೂಲ್ಕಿ ತಂಡವನ್ನು ಸೆಮಿಫೈನಲ್‌ನಲ್ಲಿ ಸೋಲಿಸಿ ಫೈನಲ್‌ಗೇರಿತ್ತು. ಬಾಲಕರ ವಿಭಾಗದಲ್ಲಿ ಬೆಳ್ತಂಗಡಿಯ ಪ್ರತೀಕ್ ಉತ್ತಮ ಅಟ್ಯಾಕರ್, ಬೆಳ್ತಂಗಡಿಯ ಸುಭಾಸ್ ಉತ್ತಮ ಸೆಟ್ಟರ್ ಮತ್ತು ಮೂಡುಬಿದಿರೆಯ ರಾಕೇಶ್ ಆಲ್‌ರೌಂಡರ್ ವೈಯಕ್ತಿಕ ಬಹುಮಾನ ಪಡೆದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಬೆಳ್ತಂಗಡಿ ತಾಲೂಕು ತಂಡ(ಮುಂಡಾಜೆ ಪದವಿಪೂರ್ವ ಕಾಲೇಜು) ಮಂಗಳೂರು ತಾಲೂಕು ತಂಡ(ಸಂತ ಅಲೋಶಿಯಸ್ ಕಾಲೇಜು)ವನ್ನು 25-20, 25-16 ನೇರ ಸೆಟ್‌ನಿಂದ ಸೋಲಿಸಿತು. ಬೆಳ್ತಂಗಡಿ ತಂಡ ಮೂಡುಬಿದಿರೆ ತಂಡವನ್ನು ಹಾಗೂ ಮಂಗಳೂರು ತಂಡ ಪುತ್ತೂರು ತಂಡವನ್ನು ಸೆಮಿಫೈನಲ್‌ನಲ್ಲಿ ಸೋಲಿಸಿ ಫೈನಲ್‌ಗೇರಿತು. ಬೆಳ್ತಂಗಡಿ ತಂಡದ ವರ್ಷಾ ಉತ್ತಮ ಅಟ್ಯಾಕರ್, ಮಂಗಳೂರಿನ ಹುಲಿಗೆಮ್ಮ ಉತ್ತಮ ಸೆಟ್ಟರ್ ಮತ್ತು ಮುಂಡಾಜೆಯ ಅಶ್ವಿನಿ ಕೆ. ಆಲ್‌ರೌಂಡರ್ ವೈಯಕ್ತಿಕ ಬಹುಮಾನ ಪಡೆದರು.