ಜಿಲ್ಲೆ

ಗ್ರಾಪಂಗಳಲ್ಲಿ ಇ-ಕಚೇರಿ ವ್ಯವಸ್ಥೆ ಜಾರಿ!

ಶಂಕರ ಗೆಜ್ಜಿ

ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸರ್ಕಾರವೆಂಬ ಹೆಗ್ಗಳಿಕೆಯೊಂದಿಗೆ ಹಲವು ಹೊಣೆಗಾರಿಕೆ ಹೊತ್ತು ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ತಂತ್ರಾಂಶ ಆಧಾರಿತ ಇ-ಕಚೇರಿ (ಇ-ಆಫೀಸ್) ವ್ಯವಸ್ಥೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿನ 6028 ಗ್ರಾಪಂಗಳ ಜನಾಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ತರುವ ಜತೆಗೆ ಸೇವೆಗಳಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು, ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಜನರಿಗೆ ಮುಟ್ಟಿಸಲು ‘ಕಾಗದ ರಹಿತ ಗ್ರಾಪಂ’ ವ್ಯವಸ್ಥೆ ಜಾರಿಗೊಳಿಸುವ ಸಿದ್ಧತೆ ಅಂತಿಮ ಹಂತದಲ್ಲಿದ್ದು, ವರ್ಷಾಂತ್ಯಕ್ಕೆ ಎಲ್ಲ ಗ್ರಾಪಂಗಳಲ್ಲಿ ಇ-ಆಫೀಸ್ ಕಾರ್ಯರೂಪಕ್ಕೆ ಬರಲಿದೆ.

ಈಗಾಗಲೇ ಗ್ರಾಪಂಗಳ ವ್ಯಾಪ್ತಿಯಲ್ಲಿ ಎಲ್ಲ ಆಸ್ತಿಗಳು, ರಿಜಿಸ್ಟ್ರರ್ ಪುಸ್ತಕ, ಠರಾವು ಪುಸ್ತಕ, ವಾರ್ಷಿಕ ಲೆಕ್ಕ ಪರಿಶೋಧನೆ ಸೇರಿದಂತೆ ಎಲ್ಲ ದಾಖಲೆಗಳು ನ್ಯಾಷನಲ್ ಇನ್‌ಾರ್ಮೆಟಿಕ್ ಸೆಂಟರ್ (ಎನ್‌ಐಸಿ) ರೂಪಿಸಿರುವ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗುತ್ತಿದೆ. ಅಲ್ಲದೆ, ಸಾರ್ವಜನಿಕರಿಗೆ ಆಸ್ತಿ ತೆರಿಗೆ, ನೀರಿನ ಕರ, ಆರೋಗ್ಯ ಕರ, ಗ್ರಂಥಾಲಯ ಕರ, ಸಾರಿಗೆ ಕರ, ಜಾಹೀರಾತು ತೆರಿಗೆ, ಕಟ್ಟಡ ಪರವಾನಗಿ ಶುಲ್ಕ, ಭಿಕ್ಷುಕರ ಕರ, ಪ್ರಮಾಣ ಪತ್ರ ಮತ್ತು ನಕಲು ಶುಲ್ಕ, ಖಾನಾ ಬದಲಾವಣೆ ಶುಲ್ಕ, ಅಭಿವೃದ್ಧಿ ಮತ್ತು ಸುಧಾರಣಾ ಶುಲ್ಕ ಸೇರಿ ಎಲ್ಲ ಸೇವೆಗಳನ್ನು ನಗದು ರಹಿತ ಸೇವೆ (ಇ-ಸ್ವೀಕೃತಿ) ವ್ಯಾಪ್ತಿಗೆ ತರಲಾಗುತ್ತಿದೆ. ಈ ಸಂಬಂಧ ಎಲ್ಲ ಪಿಡಿಒ, ಕಾರ್ಯದರ್ಶಿ, ಎ್ಡಿಎ, ಎಸ್‌ಡಿಎ, ಕ್ಲರ್ಕ್, ಬಿಲ್ ಕಲೆಕ್ಟರ್ ಸೇರಿ ಎಲ್ಲ ಸಿಬ್ಬಂದಿಗೆ ತರಬೇತಿ ನೀಡಿ, ತಂತ್ರಜ್ಞಾನದಲ್ಲಿ ಸಮರ್ಥರನ್ನಾಗಿಸುವ ಯತ್ನ ನಡೆಯುತ್ತಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಗ್ರಾಪಂಗಳಲ್ಲಿ ಎಲ್ಲ ದಾಖಲೆಗಳು ಕಂಪ್ಯೂಟರ್‌ಗಳ ಮೂಲಕವೇ ದೊರೆಯಲಿವೆ. ಗ್ರಾಮ ಪಂಚಾಯಿತಿಗಳಲ್ಲಿನ ಖರ್ಚುವೆಚ್ಚಗಳಲ್ಲಿ ಪಾರದರ್ಶಕತೆ, ಲೆಕ್ಕ ಪರಿಶೋಧನೆಯಲ್ಲಿ ಏಕರೂಪತೆ ತರಲು ನಿಟ್ಟಿನಲ್ಲಿ ವೆಬ್ ಆಧಾರಿತ ‘ಆಡಿಟ್ ಆನ್‌ಲೈನ್’ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದ ಮೂಲಕವೇ ಲೆಕ್ಕ ಪರಿಶೋಧನೆಗಳು ನಡೆಯುತ್ತಿವೆ. ಮೊದಲ ಹಂತದಲ್ಲಿ 1230 ಗ್ರಾಪಂಗಳಲ್ಲಿ ಆನ್‌ಲೈನ್ ಮೂಲಕವೇ 2019-20ನೇ ಸಾಲಿನ ಅನುದಾನ ಬಳಕೆ, ಖರ್ಚು ವೆಚ್ಚಗಳ ಸಂಪೂರ್ಣ ಲೆಕ್ಕ ಪರಿಶೋಧನೆ ನಡೆಸಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಪಂಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ ಎಂದು ಜಿಪಂ, ತಾಪಂ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ತಂತ್ರಾಂಶ ಆಧಾರಿತ ಇ-ಕಚೇರಿ (ಇ-ಆಫೀಸ್) ವ್ಯವಸ್ಥೆ ಜಾರಿಗೊಳಿಸಿ ಕ್ರಮ ವಹಿಸಲಾಗಿದೆ. ಗ್ರಾಪಂನ ಎಲ್ಲ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗ್ರಾಮೀಣರು ಆನ್‌ಲೈನ್ ಮೂಲಕವೇ ಗ್ರಾಪಂಗಳಿಗೆ ತೆರಿಗೆ ಕಟ್ಟುವ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ.| ಹರ್ಷಲ್ ಭೋಯರ್ ಜಿಪಂ ಸಿಇಒ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ