ಜಿಲ್ಲೆ

ಬಿವೈವಿ ನೇತೃತ್ವದಲ್ಲೇ 2028 ಚುನಾವಣೆ ಎಂದ ರೇಣುಕಾಚಾರ್ಯ

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ 2028ರ ಚುನಾವಣೆ ಗೆ ಹೋಗಲಿದ್ದು 140 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಭವಿಷ್ಯ ನುಡಿದರು.

ಬಿ.ಎಸ್​.ಯಡಿಯೂರಪ್ಪ ಕುಟುಂಬದ ಆರಾಧ್ಯದೈವ ಕುಣಿಗಲ್​ ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವರ ಸನ್ನಿಧಿಯಿಲ್ಲ ಬಿಎಸ್​ವೈ ಕುಟುಂಬಕ್ಕೆ ಒಳ್ಳೆಯದಾಗುವಂತೆ ಸಂಕಲ್ಪ ಮಾಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 21 ಜಿಲ್ಲಾಧ್ಯಕ್ಷರು ವಿಜಯೇಂದ್ರಗೆ ಬೆಂಬಲ ಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಗುಂಪುಗಾರಿಕೆಯಿಂದ ಪಕ್ಷಕ್ಕಾಗುತ್ತಿರುವ ಹಾನಿ ತಪ್ಪಿಸಬೇಕು ಎಂದು ಆಗ್ರಹಿಸಿದರು.

ಸ್ವಯಂ ಘೋಷಿತ ನಾಯಕರಿಂದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್​ಗೆ ಟಾಂಗ್​ ಕೊಟ್ಟ ರೇಣುಕಾಚಾರ್ಯ, ಫೇಕ್​ ನೋಟೀಸ್​ ಎಂದು ಹೇಳುವುದು ಏನು? ಯಡಿಯೂರಪ್ಪ ಕಣ್ಣೀರು ಹಾಕಿದ್ದನ್ನು ಅಭಿನಯಿಸುತ್ತಾರೆ, ನಮ್ಮೆಲ್ಲರ ನಾಯಕ ಯಡಿಯೂರಪ್ಪ ತಮಗಾಗಿ ಕಣ್ಣೀರು ಹಾಕಿಲ್ಲ ಎಂದು ಹರಿಹಾಯ್ದರು.

ಕುಮಾರ್​ ಬಂಗಾರಪ್ಪನವರೇ ನಿಮಗೆ ರಾಜಕೀಯ ಪುನರ್​ ಜನ್ಮ ಕೊಟ್ಟಿದ್ದು ಯಡಿಯೂರಪ್ಪ, ಮೊನ್ನೆ ಮೊನ್ನೆ ಬಂದವರು ವಿಜಯೇಂದ್ರಗೆ ನೀತಿ ಪಾಠ ಹೇಳುತ್ತಾರೆ.ರಮೇಶ ಜಾರಕಿಹೊಳಿ ಬಲಿಪಶು ಆಗಬೇಡಿ. ನೀವು ನನ್ನ ಸ್ನೇಹಿತರು. ಡಿಸೆಂಬರ್​ 10 ರಂದು ದಾವಣಗೆರೆ ಸಮಾವೇಶ ಆಯೋಜಿಸಿದ್ದು ಈ ಸಮಾವೇಶದಲ್ಲಿ ಮಾಜಿ ಶಾಸಕರುಗಳು, ಮಾಜಿ ಸಚಿವರು ಭಾಗವಹಿಸುತ್ತಾರೆ. ಆರ್​.ಅಶೋಕ್​, ಕೇಂದ್ರ ಸಚಿವರಿಗೂ ಆಹ್ವಾನ ನೀಡಿದ್ದೇವೆ ಎಂದರು.