ಲಿಂಗಸುಗೂರು: ನೂರು ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆಂದು ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಪಟ್ಟಣ ಹೊರವಲಯದ ಕರಡಕಲ್ಲ ಹತ್ತಿರ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಪರಿಶೀಲಿಸಿ ಶುಕ್ರವಾರ ಮಾತನಾಡಿದರು. 30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಆಸ್ಪತ್ರೆಗೆ ಬೇಕಾಗುವ ಉಪಕರಣಗಳು, ಪೀಠೋಪಕರಣಗಳು, ವೈದ್ಯರು, ಸಿಬ್ಬಂದಿ ಬೇಡಿಕೆಗೆ ಅನುಗುಣವಾಗಿ ಮುಖ್ಯ ವೈದ್ಯಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗಾಗಲೇ ಕೆಲ ಉಪಕರಣಗಳು ಬಂದಿವೆ.
ಆಸ್ಪತ್ರೆ ನಿರ್ಮಾಣದಿಂದ ಲಿಂಗಸುಗೂರು ತಾಲೂಕು ಸೇರಿದಂತೆ ಸುತ್ತ್ತಲಿನ ಊರಿನ ಜನರಿಗೆ ಅನುಕೂಲವಾಗಲಿದೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಟಿಎಪಿಎಂಎಸ್ ಅಧ್ಯಕ್ಷ ಶಶಿಧರಗೌಡ ಪಾಟೀಲ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜಗೌಡ ಗಣೇಕಲ್ಲ, ಪುರಸಭೆ ಸದಸ್ಯ ಪ್ರಮೋದ ಕುಮಾರ ಕುಲಕರ್ಣಿ, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಮುಖ್ಯ ವೈದ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ್, ಗುತ್ತಿಗೆದಾರ ನಾರಾಯಣರಾವ್ ಸಿಂಗಾಡೆ ಇದ್ದರು.