ಜಿಲ್ಲೆ

ಯರಗುಂಟಾ ಗ್ರಾಮದಲ್ಲಿ ಬರ್ಬರ ಹತ್ಯೆ

ಲಿಂಗಸುಗೂರು: ತಾಲೂಕಿನ ಯರಗುಂಟಾ ಗ್ರಾಮದಲ್ಲಿ ಬುಧವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಗ್ರಾಮದ ಬಸನಗೌಡ ಮಾಲಿಪಾಟೀಲ್ (46) ಕೊಲೆಗೀಡಾದ ದುರ್ದೈವಿ. ಬಸನಗೌಡ ಮಾಲಿಪಾಟೀಲ್ ಬುಧವಾರ ಸಂಜೆ ಟಿವಿಎಸ್ ವಾಹನದಲ್ಲಿ ಹೊರ ಹೋಗಿದ್ದು, ಮನೆಗೆ ವಾಪಸ್ ಬಂದಿರಲಿಲ್ಲ.

ಗುರುವಾರ ಬೆಳಗ್ಗೆ ಜಿ.ಜಿ.ನಾಯಕ ಎಂಬುವರ ಹೊಲದಲ್ಲಿ ಮೃತದೇಹ ಪತ್ತೆಯಾಗಿದ್ದು, ಕುಟುಂಬದವರು ಜನರು ದೌಡಾಯಿಸಿದ್ದಾರೆ. ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ನಿ ಸಂಗಮ್ಮ ನೀಡಿದ ದೂರಿನನ್ವಯ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಎಂ.ಪುಟ್ಟಮಾದಯ್ಯ, ಪಿಐ ಪುಂಡಲೀಕ ಪಟಾತ್ತಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳದ ಮೂಲಕ ಶೋಧ ಕಾರ್ಯ ನಡೆಸಿದರು. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.