ಕೂಡ್ಲಿಗಿ: ತಾಲೂಕಾದ್ಯಂತ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಈಗಾಗಲೇ ರೈತರು ಜೋಳ, ಶೇಂಗಾ, ಸಜ್ಜೆ, ರಾಗಿ ಸೇರಿ ವಿವಿಧ ಬೆಳೆಗಳನ್ನು ಬಿತ್ತಿದ್ದರು. ಕೆಲ ದಿನಗಳಿಂದ ಮಳೆ ಬಾರದೆ ಒಣಗುವ ಹಂತಕ್ಕೆ ಬಂದಿದ್ದವು. ಆದರೆ ಮಂಗಳವಾರ ರಾತ್ರಿ ಗುಡುಗು ಸಹಿತ ಉತ್ತಮ ಮಳೆ ಸುರಿದ ಕಾರಣ ಬೆಳೆಗಳಿಗೆ ಜೀವಕಳೆ ಬಂದಿದೆ. ಇದರಿಂದ ರೈತರು ಸಂತಸಗೊಂಡಿದ್ದಾರೆ. ಇನ್ನೊಂದೆಡೆ ಜಂಗಮಸೋವೆನಹಳ್ಳಿ ಹಾಗೂ ಚೌಡಾಪುರದಲ್ಲಿ ಟರ್ಕಿ ಮಾದರಿಯ ಸಜ್ಜೆ ಬಿತ್ತಿದ್ದು, 12 ಅಡಿ ಉದ್ದವಾಗಿ ಉತ್ತಮ ಬೆಳೆ ಬಂದಿತ್ತು. ಇದರಿಂದ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು.
ಆದರೆ ತಡರಾತ್ರಿ ಸುರಿದ ಬಾರಿ ಮಳೆಗೆ ಸಜ್ಜೆ ಸಂಪೂರ್ಣ ನೆಲೆಕಚ್ಚಿದ್ದು, ರೈತರಾದ ನಂದಿ ದೇವೇಂದ್ರಪ್ಪ, ಗೊಲ್ಲರ ಗೋವಿಂದಪ್ಪ, ಚೌಡಾಪುರ ಗ್ರಾಮದ ಸಿದ್ದಲಿಂಗಪ್ಪ ಅವರ 10 ಎಕರೆ ಸಜ್ಜೆ ನೆಲಕಚ್ಚಿದೆ. ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಕೆರೆಗೆ ಬಿತ್ತು ಕೋಡಿ: ರಾಮದುರ್ಗ ಗ್ರಾಮದಲ್ಲಿ ಮಳೆಗೆ ಕೆರೆ ಕೊಡಿ ಬಿದ್ದಿದ್ದು, ಗ್ರಾಮಸ್ಥರ ಸಂತಸ ಇಮ್ಮಡಿಗೊಳಿಸಿದೆ. ಕಳೆದ ಏಪ್ರಿಲ್, ಮೇನಲ್ಲಿ ಕುಡಿವ ನೀರಿಗೂ ತೊಂದರೆ ಎದುರಾಗಿತ್ತು. ಈಗ ಮಳೆಯಿಂದ ಕೆರೆ ಕೋಡಿ ಬಿದ್ದಿರುವುದು ತುಸು ನೆಮ್ಮದಿ ತಂದಿದೆ ಎನ್ನುತ್ತಾರೆ ಗ್ರಾಮಸ್ಥರು.
ಎಲ್ಲಿ ಎಷ್ಟು ಮಳೆ: ಕೂಡ್ಲಿಗಿ ಹೋಬಳಿಯಲ್ಲಿ 46 ಮಿಮೀ ಮಳೆಯಾದರೆ, ಗುಡೇಕೋಟೆ 67.3, ಕಾನಹೊಸಹಳ್ಳಿ 42.6, ಚಿಕ್ಕಜೋಗಿಹಳ್ಳಿ 56.4 ಹಾಗೂ ಬಣವಿಕಲ್ಲು ವ್ಯಾಪ್ತಿಯಲ್ಲಿ 51.2 ಮಿಮೀ ಮಳೆಯಾಗಿದೆ.