ಜಿಲ್ಲೆ

ರಾಜ್ಯದಲ್ಲಿ ಸರ್ಕಾರ ದಿವಾಳಿ, ಅಭಿವೃದ್ಧಿ ಸಂಪೂರ್ಣ ಸ್ಥಗಿತ

ಗುಂಡ್ಲುಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.


ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಭಾನುವಾರ ಬಿಜೆಪಿ ಆಯೋಜಿಸಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು, ಜತೆಗೆ ಸರ್ಕಾರದ ಖಜಾನೆ ಖಾಲಿ ಮಾಡಿದೆ. ರಾಜ್ಯದ ಯಾವುದೇ ಭಾಗದಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಪ್ರತಿ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ಅಭಿವೃದ್ಧಿ ಕುಂಠಿತವಾಗುತ್ತಿದೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಬರುತ್ತಿದೆ. ಕೇವಲ 40-50 ಕ್ಷೇತ್ರಗಳಲ್ಲಿಯೂ ಗೆಲ್ಲಲು ಸಾಧ್ಯವಾಗದಿದ್ದರೂ ನಾವು ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದೆ ಎಂದರು.
ತಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನೇ ಹೇಳಲು ಸಾಧ್ಯವಾಗದ ಕಾಂಗ್ರೆಸ್ ಲೋಕಸಭಾ ಚುನಾವಣೆ ಗೆಲ್ಲಲು ಹಣ, ಹೆಂಡ ಹಾಗೂ ತೋಳ್ಬಲ ಬಳಸುತ್ತಿದೆ. ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದೆ. ಆದರೆ ಜನ ಜಾಗೃತರಾಗಿದ್ದು ಮೋಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.


ಕಳೆದ 10 ವರ್ಷದಲ್ಲಿ ಮೋದಿ ಒಂದು ದಿನವೂ ವಿಶ್ರಾಂತಿ ಪಡೆಯದೆ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಾಡಿರುವ ಕೆಲಸಗಳನ್ನು ಇಡೀ ವಿಶ್ವವೇ ಕೊಂಡಾಡುತ್ತಿದ್ದು, ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ನಾವು ರಾಜ್ಯಾದ್ಯಂತ ಪ್ರವಾಸ ಮಾಡಿದ್ದು ಎಲ್ಲೆಡೆಯೂ ನಮ್ಮ ನಿರೀಕ್ಷೆ ಮೀರಿ ಜನ ಸ್ಪಂದಿಸುತ್ತಿದ್ದಾರೆ. ಮೋದಿ ಸರ್ಕಾರ ರಾಜ್ಯದ 54 ಲಕ್ಷ ರೈತರಿಗೆ 12,534 ಕೋಟಿ ರೂ. ಕಿಸಾನ್ ಸಮ್ಮಾನ್, ರಾಜ್ಯದ 74 ಲಕ್ಷ ಮನೆಗಳಿಗೆ ಶುದ್ಧ ಕುಡಿಯುವ ನೀರು, 40.74 ಲಕ್ಷ ಕನ್ನಡಿಗರಿಗೆ ಉಚಿತ ಎಲ್‌ಪಿಜಿ ಅನಿಲ ವಿತರಣೆ, 4.1 ಕೋಟಿ ಬಡ ಕನ್ನಡಿಗರಿಗೆ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಹಸಿವು ನೀಗಿಸಿದೆ. ಆದರೆ ಕೇಂದ್ರ ಸರ್ಕಾರ ಕೊಡುವ ಅಕ್ಕಿಯನ್ನು ಕಾಂಗ್ರೆಸ್ ತಾನು ನೀಡುತ್ತಿರುವುದಾಗಿ ತಪ್ಪು ಮಾಹಿತಿ ನೀಡುತ್ತಿದೆ ಎಂದು ಹರಿಹಾಯ್ದರು.
ಬಡವರ ಮನೆಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳ ಗೌರವಯುತ ಜೀವನಕ್ಕೆ ನೆರವಾಗುತ್ತಿದ್ದ ಭಾಗ್ಯಲಕ್ಷ್ಮಿ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೀಡುತ್ತಿದ್ದ 4 ಸಾವಿರ ರೂ. ಅನುದಾನ ನಿಲ್ಲಿಸಿ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ನನಗೆ 82 ವರ್ಷವಾಗಿದ್ದರೂ ಜನತೆಯ ಆಶೀರ್ವಾದವಿದ್ದರೆ ಮತ್ತೊಂದು ಚುನಾವಣೆ ನಡೆಸಲು ಸಿದ್ಧವಾಗಿದ್ದೇನೆ. ಜನತೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ನಿರ್ಧರಿಸಿದ್ದು ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.


ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಮಾಡಿದವರ ಸಮರ್ಥನೆ, ಹುಬ್ಬಳ್ಳಿಯಲ್ಲಿ ಅಮಾಯಕ ಹೆಣ್ಣು ಮಗಳ ಬರ್ಬರ ಹತ್ಯೆಯಾದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ದುಷ್ಕರ್ಮಿಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಒಂದೇ ಕೋಮಿನವರ ಅತಿಯಾದ ಓಲೈಕೆಯಲ್ಲಿ ತೊಡಗಿದ ಕಾಂಗ್ರೆಸ್ ಪಕ್ಷದಿಂದ ದೇಶದಲ್ಲಿ ಸುಭಿಕ್ಷತೆ ಸಾಧ್ಯವಿಲ್ಲ. ಆದ್ದರಿಂದ ವೀರಶೈವ ಸಮುದಾಯದವರು ಹಾಗೂ ಮಹಿಳೆಯರು ಮನೆ ಮನೆಗಳಿಗೆ ತೆರಳಿ ಮತದಾರರ ಮನವೊಲಿಸಿ ಎಲ್ಲರ ಮತಗಳನ್ನು ಬಿಜೆಪಿಗೆ ಹಾಕಿಸುವ ತೀರ್ಮಾನ ಮಾಡಿದರೆ ರಾಜ್ಯದ 28 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.


ಕೊಳ್ಳೇಗಾಲ ಮಾಜಿ ಶಾಸಕ ಎನ್.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಮಾತನಾಡಿದರು. ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಡಾ.ಮೋಹನ್, ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರು, ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮುಖಂಡರಾದ ನೂರೊಂದುಶೆಟ್ಟಿ, ನಾಗಶ್ರೀ ಪ್ರತಾಪ್, ಕೊಡಸೋಗೆ ಶಿವಬಸಪ್ಪ, ಎಲ್.ಸುರೇಶ್, ಪ್ರಣಯ್, ನಂದೀಶ್, ಶ್ರೀಕಂಠಪ್ಪ, ಮಲ್ಲೇಶ್‌ನಾಯ್ಕ, ಪಿ.ಗಿರೀಶ್, ಎಸ್.ಎಂ.ಮಲ್ಲಿಕಾರ್ಜುನಪ್ಪ ಮತ್ತಿತರರಿದ್ದರು.