ಬೆಳಗಾವಿ: ಕೇಂದ್ರ ಮುಖಂಡರು, ರಾಜ್ಯ ಮುಖಂಡರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದು, ಬಿಜೆಪಿಗೆ ಅದ್ಭುತ ಬೆಂಬಲ ವ್ಯಕ್ತವಾಗಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ, ಸರ್ಕಾರ ರಚಿಸುವುದು ಖಚಿತ ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸಿದ್ದಾರೆ. ಅದಕ್ಕೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಪ್ರಚಂಡ ಬಹುಮತ ಪಡೆಯಲಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದಿಯಾಗಿ ಬಿಜೆಪಿ ಮುಖಂಡರು ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ 16 ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತುಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ. ಮಣಿಪುರ, ಗೋವಾ, ಉತ್ತರಪ್ರದೇಶ ಉತ್ತರಕಾಂಡದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳು ಈಡೇರಿಲ್ಲ. ಆದರೆ, ಬಿಜೆಪಿ ನುಡಿದಂತೆ ತನ್ನ ಎಲ್ಲ ಯೋಜನೆಗಳನ್ನು ಜಾರಿಗೋಳಿಸಿದೆ. ಅದರಂತೆ ಈ ಬಾರಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಬಿಜೆಪಿ ಈಡೇರಿಸುತ್ತದೆ ಎಂದರು.
ಕೆಂಪೇಗೌಡರ ಪುತ್ಥಳಿ ನಿರ್ಮಾಣ, ಬಸವಣ್ಣವರ ಅನುಭವ ಮಂಟಪ ನಿರ್ಮಿಸಿ ಕರ್ನಾಟಕದ ಸಂಸ್ಕೃತಿ-ಗೌರವ ಎತ್ತಿ ತೋರಿಸಿದೆ. ಕರ್ನಾಟಕ ವ್ಯಾಪಾರ-ವಹಿವಾಟಿನಲ್ಲಿ ಖ್ಯಾತಿ ಪಡೆದಿದೆ. ಅದು ಸಹ ಬಿಜೆಪಿ ಅವಧಿಯಲ್ಲಿ ನಡೆದಿದೆ ಎಂಬುದು ಜನತೆಗೆ ತಿಳಿದಿದೆ ಎಂದರು. ಶಾಸಕ ಅನಿಲ ಬೆನಕೆ, ಸಂಸದೆ ಮಂಗಲ ಅಂಗಡಿ, ಮಹಾರಾಷ್ಟ್ರ ಶಿಕ್ಷಣ ಸಚಿವ ಗಿರೀಶ ಮಹಾಜನ, ಶರತ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.