ಜಿಲ್ಲೆ

ಕೆರೆ ಅಭಿವೃದ್ಧಿ ಹೆಸರಲ್ಲಿ ಲಕ್ಷಾಂತರ ರೂ. ಅವ್ಯವಹಾರ

ಹುಣಸೂರು: ತಾಲೂಕಿನ ಚಿಲ್ಕುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ರೂ.ಗಳ ಅವ್ಯವಹಾರ ನಡೆದಿದೆ ಎಂದು ಗ್ರಾಮದ ಮಖಂಡ ಹಾಗೂ ಜೆಡಿಎಸ್ ಎಸ್ಸಿ ಘಟಕದ ತಾಲೂಕು ಉಪಾಧ್ಯಕ್ಷ ಪ್ರೇಮ್‌ಕುಮಾರ್ ಆರೋಪಿಸಿದರು.

ಗ್ರಾಪಂ ವ್ಯಾಪ್ತಿಯ ಸರ್ವೇ ನಂ. 198ರಲ್ಲಿರುವ 23.34 ಎಕರೆ ವಿಸ್ತೀರ್ಣದ ದೊಂಡೆಕೆರೆಯ ಸಮಗ್ರ ಅಭಿವೃದ್ಧಿಗಾಗಿ 2023-24ನೇ ಸಾಲಿಗಾಗಿ ನರೇಗಾ ಯೋಜನೆಯಡಿ 9.50 ಲಕ್ಷ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಕಾಮಗಾರಿ ಆರಂಭಗೊಳ್ಳುವ ಮುನ್ನವೇ 1.20 ಲಕ್ಷ ರೂ.ಗಳ ಬಿಲ್ ಪಾವತಿಸಲಾಗಿದೆ. ಈ ಕುರಿತು ನಾನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮತ್ತು ಓಂಬುಡ್ಸ್‌ಮನ್‌ಗೆ ದೂರು ನೀಡಿದ್ದೇನೆ. ದೂರಿನನ್ವಯ ಫೆ.2ರಂದು ಓಂಬುಡ್ಸ್‌ಮನ್ ಅಧಿಕಾರಿಗಳು ಗ್ರಾಮಕ್ಕೆ ಬಂದು ಸ್ಥಳ ಪರಿಶೀಲನೆ ನಡಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆರೆಯನ್ನೇ ಬದಲಾಯಿಸಿದರು: ಮೈಸೂರು ಜಿಪಂ ಸಿಇಒ ನೇತೃತ್ವದ ತಂಡ ಸ್ಥಳ ಪರಿಶೀಲನೆಗಾಗಿ ಬಂದಾಗ ಗ್ರಾಪಂ.ಅಧ್ಯಕ್ಷರು, ಪಿಡಿಒ ಮತ್ತಿತರ ಸದಸ್ಯರು ಸ.ನಂ.ರಲ್ಲಿ 156ರಲ್ಲಿ 8.18 ಎಕರೆ ವಿಸ್ತೀರ್ಣವುಳ್ಳ ಹುಲಿಕೆರೆಯನ್ನು ತೋರಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ನಂಬಿಸಿದ್ದಾರೆ. ಮಾತ್ರವಲ್ಲದೆ ಕ್ರಿಯಾ ಯೋಜನೆಯೇ ಆಗಿರದ ಹುಲಿಕೆರೆಯಲ್ಲಿ ಕಾಮಗಾರಿ ನಡೆಸಿದ್ದಾರೆ. ಕೆರೆ ಅಭಿವೃದ್ಧಿ ಯೋಜನೆಯ ನೆಪದಲ್ಲಿ ನಡೆದಿರುವ ಈ ಅವ್ಯವಹಾರದ ತನಿಖೆಗಾಗಿ ಒಂಬುಡ್ಸ್‌ಮನ್ ವತಿಯಿಂದ ಫೆ.21ರಂದು ವಿಚಾರಣೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.