ಚನ್ನಮ್ಮನ ಕಿತ್ತೂರು: ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಹಾಗೂ ಹಿಂದು ವಿರೋಧಿ ನೀತಿ ಖಂಡಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಪಟ್ಟಣದಲ್ಲಿ ಶನಿವಾರ ತಹಸೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಪಂಚ ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಅಗತ್ಯ ದಿನಸಿ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಸಂಕಷ್ಟ ಸೃಷ್ಟಿಸಿದೆ. ಪ್ರತಿ ಇಲಾಖೆಗಳಲ್ಲಿ ಶುಲ್ಕ ಹೆಚ್ಚಸಿ ಪೊಳ್ಳು ಭರವಸೆ ನೀಡಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಇಸ್ಪಿಟ್ ಕ್ಲಬ್, ಓಸಿ ಹಾಗೂ ಜೂಜಾಟ ಅವ್ಯಾಹತವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಬಿಜೆಪಿ ಕಾರ್ಯಕರ್ತರು ಯಾವುದೋ ಒಂದು ಪೋಸ್ಟ್ ಮಾಡಿದರೆ ಅವರನ್ನು ಠಾಣೆಯಲ್ಲಿ ಕೂರಿಸಲು ನಿಮಗೆ ಅಧಿಕಾರವಿದೆ. ಆದರೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ತಾಲೂಕಾಧ್ಯಕ್ಷ ಶ್ರೀಕರ ಕುಲಕರ್ಣಿ ಮಾತನಾಡಿ, ಹಿಂದುಗಳಿಗೆ ಅನ್ಯಾಯ ಮಾಡುವುದು. ಮುಸ್ಲಿಮರಿಗೆ ತುಷ್ಟೀಕರಣ ಮಾಡುವ ಸಿದ್ದರಾಮಯ್ಯ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಡಾ.ಬಸವರಾಜ ಪರವಣ್ಣವರ, ನಿಜಲಿಂಗಯ್ಯ ಹಿರೇಮಠ, ಶಿವಾನಂದ ಹನುಮಸಾಗರ, ಕಿರಣ ಪಾಟೀಲ, ಸರಸ್ವತಿ ಹೈಬತ್ತಿ, ಬಸವನಗೌಡ ಸಿದ್ರಾಮಣಿ, ದಿನೇಶ ಒಳಸಂಗ ಇತರರಿದ್ದರು.