ಬೆಳಗಾವಿ ನಗರದಲ್ಲಿರುವ ಹೋಲ್‌ಸೇಲ್ ಹಣ್ಣಿನ ಮಾರುಕಟ್ಟೆಗೆ ಮಳೆ ನೀರು ನುಗ್ಗಿರುವುದು. 
ಜಿಲ್ಲೆ

ಬೆಳಗಾವಿಯಲ್ಲಿ ಮತ್ತೆ ಧಾರಾಕಾರ ಮಳೆ

ಬೆಳಗಾವಿ: ಬೆಳಗಾವಿ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಸೋಮವಾರವೂ ಭಾರಿ ಮಳೆ ಸುರಿಯಿತು. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆಯು ಒಂದೂವರೆ ಗಂಟೆಗಳವರೆಗೆ ಧಾರಾಕಾರ ಸುರಿಯಿತು.

ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿರುವ ತಗ್ಗು ಗುಂಡಿಗಳೆಲ್ಲ ತುಂಬಿ ಹರಿದವು. ಇಲ್ಲಿನ ಹೋಲ್‌ಸೇಲ್ ಹಣ್ಣಿನ ಮಾರುಕಟ್ಟೆಯಲ್ಲಿ ಮಳೆ ನೀರು ನುಗ್ಗಿದ್ದರಿಂದ ವ್ಯಾಪಾರಾಸ್ಥರು ಹಾಗೂ ಸಾರ್ವಜನಿಕರು ಪರದಾಡಿದರು. ಹಣ್ಣಿನ ಟ್ರೇಗಳು ನೀರಿನಲ್ಲಿ ತೇಲಿಹೋದವು. ರಾಷ್ಟ್ರೀಯ ಹೆದ್ದಾರಿ-4ರ ಮೇಲೆ ನೀರು ರಭಸವಾಗಿ ಹರಿದಿದ್ದರಿಂದ ಅರ್ಧ ಗಂಟೆವರೆಗೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಗೋಕಾಕ ಹಾಗೂ ಹುಕ್ಕೇರಿ ತಾಲೂಕಿನಲ್ಲೂ ಸೋಮವಾರ ಉತ್ತಮ ಮಳೆ ಸುರಿದಿದೆ. ಬೆಳಗಾವಿ ತಾಲೂಕಿನ ಸುತಗಟ್ಟಿ ಘಾಟ್‌ನಲ್ಲಿ ಮಳೆ ನೀರಿನ ಹರಿವು ಹೆಚ್ಚಾಗಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಸಂಜೆವರೆಗೂ ಜಿಟಿ ಜಿಟಿ ಮಳೆ ಸುರಿಯಿತು.