ಜಿಲ್ಲೆ

ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯಿಂದಲೇ ಕೋರ್ಟ್ ಕಲಾಪ: ಹೈಕೋರ್ಟ್‌ನ ನ್ಯಾ.ಶುಕುರ್ ಕಮಲ್

ಮೈಸೂರು: ವಕೀಲರು, ನ್ಯಾಯಾಧೀಶರಿಲ್ಲದೆ ಬರೀ ಕೃತಕ ಬುದ್ಧಿಮತ್ತೆ ಇಟ್ಟುಕೊಂಡೇ ಭವಿಷ್ಯದಲ್ಲಿ ಕೋರ್ಟ್ ಕಲಾಪಗಳು ನಡೆಯುವ ದಿನಗಳು ದೂರವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಶುಕುರ್ ಕಮಲ್ ಹೇಳಿದರು.


ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ

ಆಯೋಜಿಸಿದ್ದ ‘ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಜಸ್ಟೀಸ್ ಸಿಸ್ಟಮ್: ಎಮರ್ಜಿಂಗ್ ಟ್ರೆಂಡ್ಸ್’ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಈ ತಂತ್ರಜ್ಞಾನವು ಏಕಸ್ವಾಮತ್ಯೆ ಸಾಧಿಸಿರುವ ರಾಷ್ಟ್ರಗಳ ಕೈಗೆ ಸಿಕ್ಕಿದರೆ ಏನಾಗಬಹುದು ಎಂಬುದನ್ನು ಅರಿಯಲು ಹೊರಟರೆ ಗಾಬರಿಯಾಗುತ್ತದೆ ಎಂದರು.


ಇಡೀ ಜಗತ್ತಿನ ವ್ಯಾಪಾರ-ವಹಿವಾಟು, ಕಾರ್ಪೊರೇಟ್ ಕಂಪನಿಗಳ ನಿತ್ಯದ ವಿದ್ಯಮಾನಗಳು ಎಐ ತಂತ್ರಜ್ಞಾನವನ್ನು ಅವಲಂಬಿಸಿಯೇ ತನ್ನ ಚಟುವಟಿಕೆ ನಡೆಸಲಿವೆ. ಈಗಾಗಲೇ ಟ್ರಾಫಿಕ್ ಸಿಗ್ನಲ್‌ಗಳ ಬಳಿ ಅಳವಡಿಸಿರುವ ಅತ್ಯಾಧುನಿಕ ಕ್ಯಾಮರಾಗಳು ಮನುಷ್ಯರ ಅವಶ್ಯಕತೆಯೇ ಬೇಕಿಲ್ಲ ಎಂದು ಸಾರುತ್ತಿವೆ ಎಂದರು.


ಭಾರತದ ನ್ಯಾಯಾಂಗ ವ್ಯವಸ್ಥೆಗೆ ತೀರಾ ಅಪರಿಚಿತ ಅನ್ನಿಸುವಂತಿದ್ದ ಕೃತಕ ಬುದ್ಧಿಮತ್ತೆಯನ್ನು ಪಶ್ಚಿಮದ ದೇಶಗಳು ತಮ್ಮ ನಿತ್ಯದ ನ್ಯಾಯಾಂಗೀಯ ವಿಚಾರಣಾ ಪ್ರಕ್ರಿಯೆಗಳಲ್ಲಿ ಈಗಾಗಲೇ ಅಳವಡಿಸಿಕೊಂಡು ತೀರ್ಪು ನೀಡುವ ಸಾಧ್ಯತೆಗಳತ್ತ ಮುಖಮಾಡಿವೆ. ಭಾರತಕ್ಕೆ ತೀರಾ ಹೊಸದೆನ್ನುವ ಇದು ಪಶ್ಚಿಮದ ದೇಶಗಳಿಗೆ ತೀರಾ ಹಳೆಯದೆ ಎನ್ನವಂತೆ ಜಾರಿಗೆ ಬಂದು ತುಂಬ ದಿನಗಳಾದವು. ಭಾರತದಲ್ಲಿ ವಕೀಲ, ನ್ಯಾಯಾಧೀಶರ ಸ್ಥಾನಗಳನ್ನು ಇದು ಹೇಗೆ ತುಂಬಬಲ್ಲದು ಎಂಬುದನ್ನು ನಾವು ಕಾದು ನೋಡಬೇಕಿದೆ. ದೇಶದ ನ್ಯಾಯಾಂಗೀಯ ವ್ಯವಸ್ಥೆಯು ಅಷ್ಟಾಗಿ ಆಧುನಿಕ ತಂತ್ರಜ್ಞಾನವನ್ನು ಅವಲಂಬಿಸಲು ಹೋಗಿಲ್ಲ ಎಂದರು.


ತಂತ್ರಜ್ಞಾನದ ನೆರವಿಲ್ಲದೆಯೇ ಮನುಷ್ಯರ ವಾದಮಂಡನೆಯ ಮೇಲೆಯೇ ಮನುಷ್ಯರೇ ತೀರ್ಪು ಕೊಡುವ ಸಂದರ್ಭಗಳನ್ನು ನಾವು ನೋಡುತ್ತಿದ್ದು, ನ್ಯಾಯ ನೀಡಿಕೆಯ ವ್ಯವಸ್ಥೆಗೆ ತಂತ್ರಜ್ಞಾನದ ಮೂಗು ತೂರಿಸುವಿಕೆ ಅಲ್ಲಗಳೆಯುವಂತೆಯೂ ಇಲ್ಲ. ಆ ಸಾಧ್ಯತೆ ಘಟಿಸುವುದನ್ನು ನಿರಾಕರಿಸುವಂತೆಯೂ ಇಲ್ಲ ಎಂದು ಹೇಳಿದರು.


ನ್ಯಾಯ ನೀಡಿಕೆಯ ಪ್ರಕ್ರಿಯೆಯಲ್ಲಿ ಮನುಷ್ಯರು ಎಸಗಬಹುದಾದ ತಪ್ಪುಗಳನ್ನು ಮನುಷ್ಯರೇ ಸರಿಪಡಿಸಬಹುದಾದ ಸಾಧ್ಯತೆಗಳು ನಮ್ಮಲ್ಲಿ ಹೇರಳವಾಗಿವೆ. ಆದರೆ ತಂತ್ರಜ್ಞಾನ ಎಸಗುವ ತಪ್ಪುಗಳನ್ನು ಈ ಮನುಷ್ಯ ಜಗತ್ತು, ನ್ಯಾಯಿಕ ವ್ಯವಸ್ಥೆ ಹೇಗೆ ಎದುರಿಸಲಿದೆ ಎಂಬುದು ನಿಜಕ್ಕೂ ಸವಾಲಿನ ವಿಷಯ ಎಂದರು.


ಭಾರತ ಎಇ ತಂತ್ರಜ್ಞಾನಕ್ಕೆ ತೆರೆದುಕೊಳ್ಳಲೇಬೇಕಾದ ಅನಿವಾರ್ಯತೆ ಬರಲಿದೆ. ಅದಕ್ಕೆ ಎಲ್ಲ ರೀತಿಯಿಂದಲೂ ಸಜ್ಜುಗೊಳ್ಳಬೇಕೆಂದರೆ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು, ವಕೀಲರು, ನ್ಯಾಯಾಧೀಶರು ಕೃತಕ ಬುದ್ಧಿಮತ್ತೆಯೆಡೆಗೆ ಆಳವಾದ ಅಧ್ಯಯನ ನಡೆಸಲೇಬೇಕಿದೆ ಎಂದು ಕಿವಿಮಾತು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಸುದೇಶ್ ಮಾತನಾಡಿ, ಜಾತಿ, ಧರ್ಮ, ಮತ, ನಂಬಿಕೆಗಳ ಆಧಾರದ ಮೇಲೆ ಚದುರಿ ಛಿದ್ರವಾಗಿರುವ ಭಾರತದಂತಹ ಬಹುತ್ವದ ಆಶಯಗಳನ್ನುಳ್ಳ ದೇಶಕ್ಕೆ ಕೃತಕ ಬುದ್ಧಿಮತ್ತೆಯು ತಂದೊಡ್ಡಬಹುದಾದ ಅಪಾಯಗಳತ್ತಲೂ ಗಂಭೀರವಾಗಿ ತಲೆಕೆಡಿಸಿಕೊಳ್ಳಲೇಬೇಕಿದೆ ಎಂದರು.


ಕೃತಕ ಬುದ್ಧಿಮತ್ತೆಯು ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ವ್ಯವಸ್ಥೆಗಳ ಮೇಲೆ ಉಂಟು ಮಾಡಬಹುದಾದ ಸಕಾರಾತ್ಮಕ, ನಕಾರಾತ್ಮಕ ಪರಿಣಾಮಗಳನ್ನು ಸೂಕ್ಷ್ಮ ದೃಷ್ಟಿಕೋನಗಳಿಂದ ಪರಿಶೀಲಿಸಬೇಕಿದೆ. ಒಂದು ವಲಯಕ್ಕೆ ಸರಿಯಾಗಿ ಹೊಂದಿಕೊಳ್ಳಬಹುದಾದ ಕೃತಕ ಬುದ್ಧಿಮತ್ತೆಯು ಮತ್ತೊಂದು ವಲಯಕ್ಕೆ ಅಪಾಯಕಾರಿಯಾಗಿ ತೋರಬಹುದು. ಇದನ್ನು ನಾವು ಶೈಕ್ಷಣಿಕ ವಲಯದ ವಿವೇಕ, ವಿವೇಚನೆಗಳಿಂದ ನೋಡುವುದನ್ನು ಕಲಿಯಬೇಕಿದೆ ಎಂದು ಪ್ರೊ.ಸುದೇಶ್ ಅಭಿಪ್ರಾಯಪಟ್ಟರು.


ಪಶ್ಚಿಮದ ಅನೇಕ ದೇಶಗಳು ಈಗಾಗಲೇ ತಮ್ಮ ದರ್ಪದ ಭಾಗವಾಗಿ ಇದನ್ನು ಬಳಸ ತೊಡಗಿದ್ದಾರೆ. ಪಶ್ಚಿಮದವರು ಇದರ ಮೇಲೆ ಹಿಡಿತ ಸಾಧಿಸಹೊರಟಿದ್ದಾರೆ. ಡಾಟಾ ಅನಾಲಿಟಿಕ್ಸ್ ಮತ್ತು ಮಿಷಿನ್ ಲರ್ನಿಂಗ್ ಪ್ರಣೀತಕೃತಕ ಬುದ್ಧಿಮತ್ತೆಯನ್ನು ಇಟ್ಟುಕೊಂಡು ಮನುಷ್ಯರ ಮೈಮೇಲಿನ ಚರ್ಮದ ಬಣ್ಣದ ಆಧಾರದ ಮೇಲೆ ಅಮೆರಿಕದಂತಹ ದೇಶಗಳು ವ್ಯಕ್ತಿಯೊಬ್ಬನನ್ನು ಕೆಲಸಕ್ಕೆ ತೆಗೆದುಕೊಳ್ಳುವ ಅಥವಾ ನಿರಾಕರಿಸುವ ತಾರತಮ್ಯದ ಕಮಾಂಡ್‌ಗಳನ್ನು ತಂತ್ರಜ್ಞಾನಕ್ಕೆ ಜೋಡಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.


ಮೀಟಾ, ಚಾಟ್ ಜಿಪಿಟಿಯಂತಹವು ಮನುಷ್ಯನ ಒಳಿತಿಗೆ ನೆರವಾಗುವುದಕ್ಕಿಂತಲೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಬಿರುಕು ಉಂಟುಮಾಡಲು, ತೇಜೋವಧೆ ಮಾಡಲೆಂದೆ ಬಳಕೆಯಾಗುತ್ತಿವೆ. ಬಹಳ ಸುಲಭಕ್ಕೆ ಸಿಕ್ಕ ತಂತ್ರಜ್ಞಾನಗಳು ಉಳ್ಳವರ ಕೈಯೊಳಗಿನ ಆಯುಧಗಳಾಗಿಯೂ ಬಳಕೆಯಾಗುವ ಸಾಧ್ಯತೆ ನಿರಾಕರಿಸುವುದಿಲ್ಲ ಎಂದು ಪ್ರೊ.ಸುದೇಶ್ ಹೇಳಿದರು.


ನ್ಯಾಯಾಲಯದ ಆವರಣಕ್ಕೆ ಕೃತಕ ಬುದ್ಧಿಮತ್ತೆಯು ಕಾಲಿಡುವುದನ್ನು ನಾವು ಸ್ವಾಗತಿಸಲೇಬೇಕಿದೆ. ಸಮಾನತೆ, ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳಂತಹ ಸಾಂವಿಧಾನಿಕ ಮೌಲ್ಯಗಳ ಮೇಲೆ ನಿಂತಿರುವ ಭಾರತಕ್ಕೆ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನದಿಂದ ಅಪಾಯ ಎದುರಾಗದಿದ್ದರೆ ಅದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವು. ಇಲ್ಲಿ ಜಾತಿ, ಧರ್ಮ, ಮತಗಳೆಲ್ಲವೂ ಮನುಷ್ಯನ ಮೂಲಭೂತ ಆಸ್ಮಿತೆಯಾಗಿರುವುದರಿಂದ ಅದಕ್ಕೆ ಕೃತಕ ಬುದ್ಧಿಮತ್ತೆಯು ಹೇಗೆ ಮುಖಾಮುಖಿಯಾಗಬಹುದು ಎನ್ನುವ ಕುತೂಹಲವೂ ಇದೆ ಎಂದು ಅಭಿಪ್ರಾಯಪಟ್ಟರು.


ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಸದಸ್ಯರಾದ ಶಿವಲಿಂಗಯ್ಯ, ಪ್ರಾಂಶುಪಾಲ ಡಾ.ಪಿ.ದೀಪು, ಕಾರ್ಯಕ್ರಮದ ಸಂಯೋಜಕರಾದ ಡಾ.ಎಸ್.ಬಿ.ಬೋರೇಗೌಡ, ಡಾ.ಎ.ಆರ್.ಪ್ರಕೃತಿ, ಡಾ.ಕೆ.ಎಲ್.ಚಂದ್ರಶೇಖರ್, ಸಹಾಯಕ ಪ್ರಾಧ್ಯಾಪಕಿ ಡಾ.ಶ್ರೀದೇವಿ ಕೃಷ್ಣ ಇದ್ದರು.