ಜಿಲ್ಲೆ

ಪಾರ್ಶ್ಚ ಸೂರ್ಯಗ್ರಹಣ ಗೋಚರ

Chamarajanagar

ವಿಜಯವಾಣಿ ಸುದ್ದಿಜಾಲ ಚಾಮರಾಜನಗರ
ನಭೋಮಂಡಲದಲ್ಲಿ ಘಟಿಸುವ ವರ್ಷದ ಮೊದಲ ಸೂರ್ಯಗ್ರಹಣ ಜಿಲ್ಲೆಯಲ್ಲಿ ಶೇ.37ರಷ್ಟು ಗೋಚರಿಸಿತು.
ಭಾನುವಾರ ಬೆಳಗ್ಗೆ 10.11ಕ್ಕೆ ಆರಂಭವಾಗಿ 11.44ಕ್ಕೆ ಗರಿಷ್ಠ ಪ್ರಮಾಣದಲ್ಲಿ ಕಾಣಿಸಿಕೊಂಡು ಮಧ್ಯಾಹ್ನ 1.27ಕ್ಕೆ ಕೊನೆಗೊಂಡ ಕೌತುಕವನ್ನು ಪಾರ್ಶ್ವ ಸೂರ್ಯಗ್ರಹಣವೆಂದು ನಗರದ ಗ್ರಾೃವಿಟಿ ಸೈನ್ಸ್ ಫೌಂಡೇಷನ್ ವಿಶ್ಲೇಷಿಸಿದೆ.
ಸಂಸ್ಥೆ ವತಿಯಿಂದ ಸಾರ್ವಜನಿಕರು ಗ್ರಹಣ ವೀಕ್ಷಣೆ ಮಾಡಲು ಕಚೇರಿಯಲ್ಲಿ ಅನುಕೂಲ ಕಲ್ಪಿಸಿಕೊಡಲಾಗಿತ್ತು. ದೂರದರ್ಶಕಗಳು, ಸೌರಕನ್ನಡಗಳು, ಪಿನ್‌ಹೋಲ್ ಕ್ಯಾಮೆರಾಗಳಿಂದ ಜನರು ಗ್ರಹಣ ವೀಕ್ಷಿಸಿದರು.
ಇದೇ ವೇಳೆ ಫೌಂಡೇಷನ್‌ನ ಸಂಸ್ಥಾಪಕ ಕಾರ್ಯದರ್ಶಿ ಎ.ಎಸ್.ಅಭಿಷೇಕ್ ಮಾತನಾಡಿ, ಗ್ರಹಣವು ಪ್ರಕೃತಿಯ ಅತ್ಯುತ್ತಮ ವಿದ್ಯಮಾನಗಳಲ್ಲಿ ಒಂದು. ಜಿಲ್ಲೆಯ ಜನರು ಮೂಢನಂಬಿಕೆಗಳಿಗೆ ಒಳಗಾಗದೆ ಸೌರ ಕನ್ನಡಕಗಳನ್ನು ಬಳಸಿ ಗ್ರಹಣ ವೀಕ್ಷಿಸಬೇಕು ಎಂದು ಸಲಹೆ ನೀಡಿದರು. ಸೂರ್ಯಗ್ರಹಣ ಮತ್ತು ಭಾನುವಾರದ ಹಿನ್ನೆಲೆ ನಗರ ಸ್ತಬ್ಧಗೊಂಡಿತ್ತು. ಗ್ರಹಣ ಕಾಲದಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಸಾರ್ವಜನಿಕರು ರಸ್ತೆಗಿಳಿಯದ ಕಾರಣ ಪ್ರಮುಖ ವೃತ್ತಗಳು ಬಿಕೋ ಎನ್ನುತ್ತಿದ್ದವು. ಭಾನುವಾರದ ಕಾರಣಕ್ಕೆ ಭರ್ಜರಿ ವ್ಯಾಪಾರದ ಲೆಕ್ಕಾಚಾರ ಹಾಕಿದ್ದ ಮಾಂಸ ಮಾರಾಟ ಮಳಿಗೆಗಳ ಮಾಲೀಕರು ಬೆಳಗ್ಗೆ ಗ್ರಾಹಕರಿಗಾಗಿ ಕಾದು ಕುಳಿತಿದ್ದ ದೃಶ್ಯಗಳು ಕಂಡುಬಂದವು. ಸಂಜೆ ವೇಳೆಗೆ ನಗರದಲ್ಲಿ ವಾಹನಗಳ ಸಂಚಾರ ಕಂಡುಬಂತು.
ದೇವಸ್ಥಾನಗಳು ಬಂದ್
ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ, ಯಳಂದೂರಿನ ಬಿಳಿಗಿರಿರಂಗನಾಥ ಸ್ವಾಮಿ, ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಮಧ್ಯರಂಗ, ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಸೇರಿದಂತೆ ಎಲ್ಲ ದೇವಸ್ಥಾನಗಳು ಸೂರ್ಯಗ್ರಹಣದ ಕಾಲದಲ್ಲಿ ಬಾಗಿಲು ಮುಚ್ಚಿದ್ದವು. ಗ್ರಹಣ ಕಳೆದ ನಂತರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಮನೆ ಮುಂದೆ ಒನಕೆ
ಸೂರ್ಯಗ್ರಹಣ ಆರಂಭಗೊಳ್ಳುತ್ತಿದ್ದಂತೆ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮ ಮತ್ತು ಇತರೆಡೆ ಜನರು ಮನೆಗಳ ಮುಂದೆ ಒನಕೆ ನಿಲ್ಲಿಸಿದರು. ಕಳೆದ ಬಾರಿ ಕಂಕಣ ಸೂರ್ಯಗ್ರಹಣ ಗೊಚರಿಸಿದ್ದಾಗಲೂ ಜನರು ಇದೇ ರೀತಿ ಮನೆಗಳ ಆವರಣದಲ್ಲಿ ತಟ್ಟೆ, ಪಾತ್ರೆಗಳನ್ನಿಟ್ಟು ಅವುಗಳ ಒಳಗೆ ಒನಕೆ ನಿಲ್ಲಿಸಿ ಪೂಜೆ ನೆರವೇರಿಸಿದ್ದರು.