ಕವಿತಾಳ: ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಹಿನ್ನೆಲೆಯಲ್ಲಿ ರೈತರು ಕಟಾವು ಮಾಡಿದ ಈರುಳ್ಳಿ ಬೆಳೆಯನ್ನು ಹೊಲದಲ್ಲೇ ಬಿಟ್ಟಿದ್ದು, ಮಳೆಗೆ ಕೊಳೆಯುತ್ತಿದೆ.
ಚಿಂಚರಕಿ, ಹೀರಾ, ತೊಪ್ಪಲದೊಡ್ಡಿ, ಸೈದಾಪುರ, ಕಲಂಗೇರಾ, ಹಣಗಿ, ಕವಿತಾಳ, ವಟಗಲ್, ಅಮೀನಗಡ, ಪಾಮನಕಲ್ಲೂರು, ಆನಂದಗಲ್, ಬೆಂಚಮರಡಿ, ತುಪ್ಪದೂರು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಈರುಳ್ಳಿ ಬೆಳೆಯಲಾಗಿದೆ. ಆದರೆ, ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಕುಸಿತವಾಗಿದ್ದರಿಂದ ರೈತರು ಚಿಂತೆಗೀಡಾಗಿದ್ದಾರೆ.
ಈರುಳ್ಳಿಯನ್ನು ಮಾರುಕಟ್ಟೆಗೆ ಒಯ್ದ ಖರ್ಚು ಸಹ ಬಾರದ ಪರಿಸ್ಥಿತಿ ಇದೆ. ವ್ಯಾಪಾರಿಗಳು ಒಂದು ಕ್ವಿಂ.ಗೆ ಕೇವಲ 500 ರೂ. ಕೇಳುತ್ತಾರೆ. ಎಪಿಎಂಸಿಗೆ ಹೋದರೆ ಈರುಳ್ಳಿಯನ್ನು ಕೇಳುವವರೇ ಇಲ್ಲ. ಹೀಗಾಗಿ ರೈತರು ಹೊಲದಲ್ಲಿಯೇ ಈರುಳ್ಳಿ ಬೆಳೆ ಕೊಳೆತರೂ ಪರವಾಗಿಲ್ಲ ಎನ್ನುತ್ತಿದ್ದಾರೆ. ಸರ್ಕಾರ ಬೇರೆ ಬೆಳೆಗೆ ಬೆಂಬಲ ಬೆಲೆ ನೀಡಿದಂತೆ ಈರುಳ್ಳಿಗೂ ನೀಡಬೇಕು ಎಂದು ರೈತರಾದ ರಾಘವೇಂದ್ರ ಬೆಂಚಮರಡಿ, ಹುಚ್ಣಣ್ಣ ಅಮೀನಗಡ, ಮುದೆಯಪ್ಪ ಹೀರಾ, ರಾಮಣ್ಣ ಹಣಗಿ, ಅಯ್ಯಪ್ಪ ಕುರಬರ ಒತ್ತಾಯಿಸಿದ್ದಾರೆ.