ಜಿಲ್ಲೆ

ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆ ಹೆರಿಗೆ ವಿಭಾಗದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿ ಬಾಣಂತಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಮತ್ತೊಂದೆಡೆ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ (31) ಮೃತ ಬಾಣಂತಿ. ವೈದ್ಯರು ಜ.22ರಂದು ಹೆರಿಗೆಗೆ ದಿನಾಂಕ ನೀಡಿದ್ದರು. ಮನೆಯಲ್ಲಿ ಹೆರಿಗೆ ನೋವು ಕಾಣಿಸಿದ ಹಿನ್ನೆಲೆಯಲ್ಲಿ ಅಂಜಲಿ ಪಾಟೀಲ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮೊದಲು ನಾರ್ಮಲ್ ಹೆರಿಗೆ ಆಗುತ್ತದೆ ಎಂದು ಹೇಳಿದರು. ತದನಂತರ ಹೈರಿಸ್ಕ್ ಪ್ರೆಗ್ನೆನ್ಸಿ ಎಂದು ಹೇಳಿ ಸಿಜೇರಿಯನ್ ಮಾಡಿದ್ದರು.

ಹೆರಿಗೆಯಾದಾಗ ಅಂಜಲಿ ಆರೋಗ್ಯ ಸ್ಥಿರವಾಗಿತ್ತು. ಆದರೆ, ಮಂಗಳವಾರ ಬೆಳಗ್ಗೆ ಆರೋಗ್ಯ ಸ್ಥಿತಿ ಬಿಗಡಾಯಿಸಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷೃದಿಂದಲೇ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಖಂಡಿಸಿ ಬಿಮ್ಸ್ ಆಸ್ಪತ್ರೆಯ ಶವಾಗಾರದ ಎದುರು ನಿಲಜಿ ಗ್ರಾಮಸ್ಥರು ಹಾಗೂ ಮೃತ ಬಾಣಂತಿ ಸಂಬಂಧಿಕರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಾವಿಗೆ ಏನು ಕಾರಣ: ಬಿಮ್ಸ್ ಹೆರಿಗೆ ವಿಭಾಗದ ಮುಖ್ಯಸ್ಥ ಡಾ.ವಸಂತ ಕಬ್ಬೂರ ಮಾತನಾಡಿ, ಸೋಮವಾರ ಸಂಜೆ 4 ಗಂಟೆಗೆ ಅಂಜಲಿ ಪಾಟೀಲ ಒಪಿಡಿಗೆ ಬಂದಿದ್ದರು. ಜ.22ರಂದು ಹೆರಿಗೆ ದಿನಾಂಕ ನೀಡಲಾಗಿತ್ತು. ಒಪಿಡಿಯಲ್ಲಿ ಪರಿಶೀಲನೆ ನಡೆಸಿದಾಗ ಮಗುವಿನ ಹೃದಯ ಬಡಿತ ಕಡಿಮೆ ಆಗಿತ್ತು. ಆ ಕಾರಣಕ್ಕೆ ಸಿಜೇರಿಯನ್ ಮೂಲಕ ರಾತ್ರಿ 11ಕ್ಕೆ ಹೆರಿಗೆ ಮಾಡಲಾಗಿತ್ತು. ನಂತರ ರಕ್ತ ಹೆಪ್ಪುಗಟ್ಟಿ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಬೆಳಗ್ಗೆ 5 ಗಂಟೆಗೆ ಮೃತಪಟ್ಟಿದ್ದಾರೆ. ಅಂಜಲಿ ಸಾವಿಗೆ ಆಮ್ನಿಯೋಟೆಕ್ ಪ್ಲೊಯಿಡ್ ಎಂಬಾಲೀಸ್ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಬಾಣಂತಿ ಅಂಜಲಿ ಪಾಟೀಲ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದಿಲ್ಲ. ತಜ್ಞ ವೈದ್ಯರು ಪರಿಶೀಲಿಸಿದಾಗ ಹೈ ರಿಸ್ಕ್ ಪ್ರ್ರೆಗ್ನೆನ್ಸಿ ಅಂತ ಗೊತ್ತಾದ ತಕ್ಷಣವೇ ವೈದ್ಯರು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾರೆ. ಅಂಜಲಿ ಅವರಿಗೆ ರಕ್ತದೊತ್ತಡ ಕಡಿಮೆಯಾಗಿದೆ. ಆಮ್ನಿಯೋಟೆಕ್ ಪ್ಲೂಯಿಡ್ ಎಂಬಾಲೀಸ್ ಕಾರಣ ಎಂದು ಶಂಕಿಸಲಾಗಿದೆ. | ಡಾ.ಅಶೋಕಕುಮಾರ ಶೆಟ್ಟಿ, ಬಿಮ್ಸ್ ನಿರ್ದೇಶಕ