ತಾರಾನಗರದ ಆಂಜನೇಯ ದೇವಸ್ಥಾನದ ಬಳಿ ಕರಡಿ ಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿರುವುದು. 
ಜಿಲ್ಲೆ

ತಾರಾನಗರದಲ್ಲಿ ಕರಡಿ ಓಡಾಟ

ನರೇಶ್ ಕುಮಾರ್

ಸಂಡೂರು: ತಾರಾನಗರದ ಕಾರ್ತಿಕೇಶ್ವರ ಪ್ರೌಢಶಾಲೆ ಪಕ್ಕದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನ ಬಳಿ ನಾಲ್ಕೈದು ದಿನಗಳಿಂದ ಕರಡಿ ಓಡಾಡುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿದೆ.

ಕರಡಿಯೊಂದು ಶುಕ್ರವಾರ ರಾತ್ರಿ ಆಂಜನೇಯ ಗುಡಿಯ ಗೇಟ್ ಮುರಿದು ದೇವಸ್ಥಾನಕ್ಕೆ ಹೋಗಿ ದೀಪದ ಎಣ್ಣೆ ಕುಡಿದು ಪರಾರಿಯಾಗಿದೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಶನಿವಾರ ಸಹ ಕರಡಿ ಬಂದು ಹೋಗಿದ್ದು, ಜನರು ಭಯಭೀತರಾಗಿದ್ದಾರೆ.

ಮೊದಲು ಕರಡಿ ಹಿಡಿದು ಕಾಡಿಗೆ ಬಿಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ದಕ್ಷಿಣವಲಯದ ಆರ್‌ಎಫ್‌ಒ ಗಿರೀಶ್ ಕುಮಾರ್ ಅವರು ಸೋಮವಾರ ಬೋನು ಅಳವಡಿಕೆ ಮಾಡಿಸಿದ್ದಾರೆ. ಕರಡಿ ಓಡಾಡಿದ ಸ್ಥಳದಲ್ಲಿ ಈಗಾಗಲೇ ಬೋನು ಅಳವಡಿಸಿ, ಅದರಲ್ಲಿ ಜೇನುತುಪ್ಪ, ಎಣ್ಣೆ, ಹಣ್ಣುಗಳನ್ನು ಇಡಲಾಗಿದೆ.

ಶೀಘ್ರವೇ ಕರಡಿಯನ್ನು ಹಿಡಿದು ಅರಣ್ಯಕ್ಕೆ ಬಿಡಲಾಗುವುದು ಎಂದು ಗಿರೀಶ್ ತಿಳಿಸಿದರು. ಇದೇ ಗ್ರಾಮದಲ್ಲಿ 5 ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಕರಡಿಯನ್ನು ಬೋನಿನಲ್ಲಿ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿತ್ತು.