ಜಿಲ್ಲೆ

ಆಧ್ಯಾತ್ಮಿಕತೆಯಲ್ಲಿ ಅಡಗಿದೆ ಆನಂದ

ಪ್ರಶಾಂತ ಹೂಗಾರ

ಅಥಣಿ: ಆಧ್ಯಾತ್ಮಿಕ ಚಿಂತನೆಯಲ್ಲಿ ಬದುಕಿನ ಆನಂದ ಅಡಗಿದೆ. ಹಾಗಾಗಿ ಎಲ್ಲರೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಮೋಟಗಿಮಠದ ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ಸಿನ ನೆಮ್ಮದಿಗಾಗಿ ಮಹಾತ್ಮರ ಚರಿತ್ರೆ ಓದಬೇಕು. ಮನಶಾಂತಿಗಾಗಿ ಯೋಗ, ಧ್ಯಾನ, ಸಂಗೀತದಲ್ಲಿ ಪಾಲ್ಗೊಳ್ಳಬೇಕು. ಜನಜಾಗೃತಿ ಪಾದಯಾತ್ರೆ ಸೇವಾಕಾರ್ಯ ಶ್ಲಾಘನೀಯ ಎಂದರು.

ನೇತೃತ್ವ ವಹಿಸಿದ್ದ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಜನರನ್ನು ನಿರಂತರವಾಗಿ ಜಾಗೃತಗೊಳಿಸಲು ಅಥಣಿಯ ಮೂರು ಮಠಗಳು ಶ್ರಮಿಸುತ್ತಿವೆ.

ಬಸವಾದಿ ಶರಣರ ಸಂದೇಶ ತಲುಪಿಸುವಲ್ಲಿ ಅಥಣಿ ಭಕ್ತರ ಸೇವಾಕಾರ್ಯ ಸ್ಮರಣೀಯವಾಗಿದೆ ಎಂದರು.

ಮುದಗಲ್ಲ ಮಹಾಂತ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಬೆಳಕು ನೀಡುವುದು ಮಠಾಧೀಶರ ಕರ್ತವ್ಯವಾಗಿದೆ. ಕಾಯಕ,ದಾಸೋಹ, ಅರಿವು, ಆಶ್ರಯ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿ ಬಸವಾದಿ ಶರಣರ ಚಿಂತನೆ ಭಕ್ತರಲ್ಲಿ ಜೀವಂತವಾಗಿರಿಸುವ ಕೆಲಸ ಮಾಡುತ್ತಿರುವ ಅಥಣಿ ಮಠಾಧೀಶರ ಕಾರ್ಯ ಅನನ್ಯ. ದುಶ್ಚಟಗಳಿಂದ ಜನರನ್ನು ಹೊರತರುವುದು ಜನಜಾಗೃತಿ ಪಾದಯಾತ್ರೆಯ ಉದ್ದೇಶವಾಗಿದೆ ಎಂದರು.

ಗಚ್ಚಿನಮಠ, ಗೆಜ್ಜಿ ಗಲ್ಲಿ, ಸಂಕಗಲ್ಲಿ, ಕೊಪ್ಪದ ಗಲ್ಲಿ, ಮುಖ್ಯರಸ್ತೆ, ಸಿದ್ಧೇಶ್ವರ ಅಗಸಿ, ಶಿವಯೋಗಿನಗರ, ವಿಜಯಪುರ ರಸ್ತೆ ಮೂಲಕ ಸಾಗಿ ಗವಿಸಿದ್ದಮಡ್ಡಿಗೆ ಪಾದಯಾತ್ರೆ ಸಾಗಿತು. ಮುಕ್ತಾಯಿ ಮಹಿಳಾ ಬಳಗ, ಅಥಣಿಶ ಯುವವೇದಿಕೆ, ಚನ್ನಬಸವ ಯುವಕ ಸಂಘ ಹಾಗೂ ಇತರೆ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.