ಕೂಡ್ಲಿಗಿ: ಒಳ್ಳೆಯ ಮಾರ್ಗದಲ್ಲಿ ನಡೆಯಲು ವಿದ್ಯಾರ್ಥಿಗಳು ಉತ್ತಮ ನಡೆ-ನುಡಿ ಅನುಸರಿಸಬೇಕು ಎಂದು ಪ್ರಶಾಂತಸಾಗರ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಮಠ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ನಾವು ಆಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡಬಾರದು. ಮಾತಿನಲ್ಲಿ ಸತ್ವ ಇರಬೇಕು. ಪಾರದರ್ಶಕತ್ವವ ಹೊಂದಿರಬೇಕು. ಅದೇ ರೀತಿ ನಡೆಯೂ ಇರಬೇಕು ಎಂದರು.
ಡಾ.ಎಚ್.ಎಂ.ಸುಮಂಗಳ ಮಾತನಾಡಿ, ಸಾಮಾನ್ಯವಾಗಿ ಮಹಿಳೆಯರಲ್ಲಿ ನಿಶಕ್ತಿ ಹೆಚ್ಚು. ಶಾಲೆ-ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ಪೋಷಕಾಂಶ ಇರದ ತಿನಿಸುಗಳನ್ನು ತಿನ್ನುವುದರಿಂದ ಅವರಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಮಹಿಳೆಯರು ಆಹಾರವನ್ನು ಹೇಗೆ, ಯಾವುದು ಎಷ್ಟು ಸೇವಿಸಬೇಕು ಎಂಬುದನ್ನು ತಿಳಿದಿರಬೇಕು ಎಂದರು.
ಪ್ರಮುಖರಾದ ಓಬಣ್ಣ, ಉಪನ್ಯಾಸಕರಾದ ಸತೀಶ್ ಕಾಟಣ್ಣನವರ್, ವೀರಣ್ಣ, ಶಿವಕುಮಾರ್, ಸುಷ್ಮಿತಾ, ಅನಿತಾ, ಮಂಜುಕರ್ ಮೌಳಿ, ಸತ್ಯಮೂರ್ತಿ, ಕೆ.ಎಚ್.ಎಂ.ವೀರೇಶ ಇತರರಿದ್ದರು.