ಉಡುಪಿ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ಇನ್ ಸೈಟ್ಸ್ ಕೇರ್ನಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಐವಿಎಫ್ ಮತ್ತು ಫರ್ಟಿಲಿಟಿ ಫಲವತ್ತತೆಯ ಕೇಂದ್ರ ಮನ್ನಣೆಯೊಂದಿಗೆ ಪ್ರಶಸ್ತಿ ಲಭಿಸಿದೆ.
ಮಣಿಪಾಲ ಸಹಹಿತಾ ಪ್ರಜನನ ಕೇಂದ್ರ (ಎಂಎಆರ್ಸಿ)ವು ತನ್ನ 35 ವರ್ಷದ ಸಮರ್ಪಿತ ಸೇವೆಯೊಂದಿಗೆ 10 ಸಾವಿರಕ್ಕೂ ಹೆಚ್ಚು ಶಿಶುಗಳ ಜನನಕ್ಕೆ ಕಾರಣವಾಗಿದೆ. ಕೇಂದ್ರದ ಪ್ರಯೋಗದ ಮೂಲಕ ನಡೆದ ಮೊದಲ ಶಿಶುವಿಗೆ ಈಗ 25 ವರ್ಷವಾಗಿದೆ.
ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಪ್ರಶಸ್ತಿ ಪ್ರದಾನಿಸಿ ಮಾತನಾಡಿ, ಕೇಂದ್ರದ ಸಾಧನೆಯ ಬಗ್ಗೆ ಅಪಾರವಾದ ಹೆಮ್ಮೆ ಇದೆ. ತಂಡದ ಸಮರ್ಪಣೆ ಮತ್ತು ವೈದ್ಯರ ಪರಿಣತಿ ಸಾವಿರಾರು ಕುಟುಂಬಗಳಿಗೆ ಬೆಳಕು ನೀಡಿದೆ. ಇನ್ ಸೈಟ್ಸ್ ಕೇರ್ನ ಈ ಪ್ರಶಸ್ತಿಯು ಅವರ ಕಠಿಣ ಪರಿಶ್ರಮ ಮತ್ತು ಒದಗಿಸಿದ ಸಹಾನುಭೂತಿಯ ಕಾಳಜಿಗೆ ಸಾಕ್ಷ್ಯವಾಗಿದೆ ಎಂದರು.
ಮಾಹೆ ಮಣಿಪಾಲದ ಸಿಒಒ ಸಿ.ಜಿ. ಮುತ್ತಣ್ಣ, ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್, ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹಾಗೂ ಮಾರ್ಕ್ ತಂಡದವರು ಉಪಸ್ಥಿತರಿದ್ದರು. ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ. ಪ್ರತಾಪಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾರ್ಕ್ನ ಪ್ರಾಧ್ಯಾಪಕ ಮತ್ತು ಮುಖ್ಯ ಭ್ರೂಣಶಾಸ್ತ್ರಜ್ಞ ಡಾ. ಸತೀಶ್ ಅಡಿಗ, ಪ್ರಾಧ್ಯಾಪಕ ಡಾ.ಪ್ರಶಾಂತ್ ಕೆ. ಅಡಿಗ, ಸಹಪ್ರಾಧ್ಯಾಪಕಿಯರಾದ ಡಾ.ಅಂಜಲಿ ಎಸ್. ಮುಂಡ್ಕೂರ್, ಡಾ.ವಿದ್ಯಾಶ್ರೀ ಜಿ. ಪೂಜಾರಿ ಸೇರಿದಂತೆ ತಂಡದ ಇತರ ಪ್ರಮುಖ ಸದಸ್ಯರನ್ನು ವಿಶ್ವವಿದ್ಯಾಲಯ
ಮತ್ತು ಆಸ್ಪತ್ರೆಯ ಅಧಿಕಾರಿಗಳು ಅಭಿನಂದಿಸಿದರು.
ಮಣಿಪಾಲದ ಮಾರ್ಕ್ ಕೇಂದ್ರವು ಪುರುಷ ಸಂತಾನಹೀನತೆಯ ಮೌಲ್ಯಮಾಪನಕ್ಕಾಗಿ ಸಂಪೂರ್ಣ ಸುಸಜ್ಜಿತ ಆಂಡ್ರಾಲಜಿ ಪ್ರಯೋಗಾಲ ಹೊಂದಿದೆ. ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸಂಗ್ರಹಣೆಗಾಗಿ ವೀರ್ಯ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದೆ. ಇದರ ಭ್ರೂಣಶಾಸ್ತ್ರ ಪ್ರಯೋಗಾಲಯವು ಅಂತಾರಾಷ್ಟ್ರೀಯ ಗುಣಮಟ್ಟ ಪೂರೈಸುವ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಕೇಂದ್ರವು ಫಲವತ್ತತೆ ವರ್ಧನೆಗಾಗಿ ಲ್ಯಾಪರೊಸ್ಕೋಪಿಕ್ ಮತ್ತು ಹಿಸ್ಟರೊಸ್ಕೋಪಿಕ್ ಶಸ್ತ್ರ ಚಿಕಿತ್ಸೆ ನೀಡುತ್ತದೆ. ಅಲ್ಲದೆ, ಆಂಕೊಫೆರ್ಟಿಲಿಟಿ ತಂತ್ರದ ಸೇವೆಯನ್ನೂ ಒದಗಿಸುತ್ತಿದೆ. ಮಕ್ಕಳನ್ನು ಪಡೆಯ ಬಯಸುವ ಅಸಂಖ್ಯಾತ ದಂಪತಿಗಳಿಗೆ ಇದು ಭರವಸೆಯ ದಾರಿದೀಪವಾಗಿದೆ.