ಗುಡಿಬಂಡೆ: ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನ ನೀಡುತ್ತಿರುವ ಬಿಸಿಯೂಟದ ಸಾಂಬಾರ್‌ನಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದು, ತಾಲೂಕಿನ ಅನೇಕ ಶಾಲೆಗಳಲ್ಲಿ ಮಕ್ಕಳು ಊಟ ಮಾಡಲು ಹಿಂದೇಟು ಹಾಕುತಿದ್ದಾರೆ. ಕೂಡಲೇ ಅಧಿಕಾರಿಗಳು ಕಳಪೆ ತೊಗರಿಬೇಳೆ ನೀಡುತ್ತಿರುವ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ವಹಿಸಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ.
ಪಟ್ಟಣದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹದ ಬಿಸಿಊಟದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪಾಲಕರು ಆಕ್ರೋಶ ಹಾರ ಹಾಕಿದ್ದು, ಬಿಸಿಯೂಟಕ್ಕೆ ಪೂರೈಕೆಯಾಗುತ್ತಿರುವ ಕಳಪೆ ತೊಗರಿಬೇಳೆ ಕಾರಣ. ತೊಗರಿಬೇಳೆ ಹುಳು ಬಿದ್ದಿದ್ದು, ಅದನ್ನೇ ಸಾಂಬಾರ್ ತಯಾರಿಸಲು ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿಯನ್ನು ವಿಚಾರಿಸಿದರೆ ನಮಗೆ ನೀಡುವ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುತ್ತೇವೆ ಎಂದಷ್ಟೇ ಉತ್ತರಿಸುತ್ತಾರೆ. ಮುಖ್ಯಶಿಕ್ಷಕರನ್ನು ಪ್ರಶ್ನಿಸಿದರೆ, ಇಲ್ಲಿಗೆ ಹುಳುಗಳಿರುವ ತೊಗರಿಬೇಳೆಯನ್ನು ಸರಬರಾಜು ಮಾಡಲಾಗುತ್ತಿದೆ. ಹುಳುಗಳನ್ನು ಪ್ರತ್ಯೇಕಗೊಳಿಸಲು ತೊಗರಿಬೇಳೆಯನ್ನು ಬಿಸಿಲಿನಲ್ಲಿ ಇಡುತ್ತೇವೆ. ಆದರೂ ಹುಳುಗಳು ಕಂಡುಬರುತ್ತಿವೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎನ್ನುತ್ತಾರೆ.
ಸರ್ಕಾರಿ ಶಾಲೆಯಲ್ಲಿ ಬಹುತೇಕ ಬಡವರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ಹಸಿವಿನಿಂದ ಇರಬಾರದೆಂದು ಸರ್ಕಾರ ಕೋಟಿ ಕೋಟಿ ಅನುದಾನ ಬಳಕೆ ಮಾಡಿ ಬಿಸಿಯೂಟ ಯೋಜನೆ ಆರಂಭಿಸಿದೆ. ಆದರೆ, ಸರ್ಕಾರಿ ಶಾಲೆಗಳಿಗೆ ಕಳಪೆ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಲು ಹಿಂಜರಿಯುತ್ತಿದ್ದಾರೆಂಬ ಆರೋಪಗಳು ವ್ಯಾಪಕವಾಗಿದೆ.
"ಗುಡಿಬಂಡೆ ತಾಲೂಕಿನ ನಾಲ್ಕು ಶಾಲೆಗಳಿಗೆ ನೀಡಿರುವ ತೊಗರಿಬೇಳೆಯಲ್ಲಿ ಹುಳುಗಳು ಕಂಡುಬಂದಿರುವ ಬಗ್ಗೆ ದೂರು ಬಂದಿದೆ. ಆದ್ದರಿಂದ ಅದನ್ನು ಕೂಡಲೇ ಹಿಂಪಡೆಯುವಂತೆ ತಿಳಿಸಿದ್ದು, ಬೇರೆ ತೊಗರಿಬೇಳೆ ಸರಬರಾಜು ಮಾಡಲಾಗುವುದು." - ನಳಿನಾಕ್ಷಿ, ಪ್ರಭಾರಿ ಸಹಾಯಕ ನಿರ್ದೇಶಕಿ, ಅಕ್ಷರ ದಾಸೋಹ, ಗುಡಿಬಂಡೆ