ದೇವದುರ್ಗ: ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ತಾಂತ್ರಿಕ ಸಿಬ್ಬಂದಿ ನೇಮಕದಲ್ಲಿ ಮೀಸಲಾತಿ ಸೌಲಭ್ಯವನ್ನು ಉಲ್ಲಂಘಿಸಲಾಗಿದೆ ಎಂದು ಅಖಂಡ ದೇವದುರ್ಗ ಹೋರಾಟ ಸಮಿತಿ ಸಂಚಾಲಕ ಶಿವರಾಜ ಕೊತ್ತದೊಡ್ಡಿ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ತಾಲೂಕಿನಲ್ಲಿ ನಡೆದ 200 ಕೋಟಿ ರೂ. ಅವ್ಯವಹಾರ ಸಂಬಂಧ 19 ಜನ ತಾಂತ್ರಿಕ ಸಿಬ್ಬಂದಿಯನ್ನು (ಇಂಜಿನಿಯರ್) ಅಮಾನತು ಮಾಡಲಾಗಿತ್ತು. ಸದರಿ ಜಾಗಕ್ಕೆ ಹೊಸ ನೇಮಕ ಮಾಡಲು ಏಜೆನ್ಸಿ ಅರ್ಜಿ ಆಹ್ವಾನಿಸಿದೆ. ಆದರೆ ನೇಮಕಾತಿಯಲ್ಲಿ ಮೀಸಲು ಸೌಲಭ್ಯವನ್ನು ಉಲ್ಲಂಘಿಸಲಾಗಿದೆ. ಜಿಪಂ ಅಧಿಕಾರಿಗಳು ಹಣ ನೀಡಿದವರೆಗೆ ಕೆಲಸ ನೀಡಿ ಮನಬಂದಂತೆ ಮೀಸಲು ಹಂಚಿದ್ದಾರೆ ಎಂದು ದೂರಿದರು.
ತಾಲೂಕಿನಲ್ಲಿ 33 ಗ್ರಾಪಂ ಖಾಲಿ ಇರುವ ಹುದ್ದೆಗಳಲ್ಲಿ 14ಹುದ್ದೆಗೆ ಮೀಸಲು ಕಲ್ಪಿಸಿದರೆ 18ಹುದ್ದೆಗೆ ಮೀಸಲು ನೀಡಿಲ್ಲ. ಸಿವಿಲ್ ತಾಂತ್ರಿಕ ಸಹಾಯಕರು 14 ಹುದ್ದೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಒಂದು ಹುದ್ದೆಯನ್ನೂ ಹಂಚಿಕೆ ಮಾಡಿಲ್ಲ. ಕೆಟಗರಿ 1, 2ಬಿ, ಸಾಮಾನ್ಯ ವರ್ಗದ ಪುರುಷರಿಗೆ ಅವಕಾಶವಿಲ್ಲ. ಎಸ್ಟಿ ಮೀಸಲು ಕ್ಷೇತ್ರವಾದ ತಾಲೂಕಿನಲ್ಲಿ ಎಸ್ಟಿಗೆ ಮೀಸಲು ನೀಡಲಾಗಿಲ್ಲ. 14 ಹುದ್ದೆಗಳಲ್ಲಿ ಎಸ್ಸಿ 4, 2ಎ ವರ್ಗಕ್ಕೆ 2, 3ಬಿ ವರ್ಗಕ್ಕೆ 2, 3ಎ ವರ್ಗಕ್ಕೆ 2, ಸಾಮಾನ್ಯ ವರ್ಗಕ್ಕೆ 4 ಹಂಚಿಕೆ ಮಾಡಲಾಗಿದೆ. ಜನರಲ್‌ನಲ್ಲಿ ಒಂದು ಮಹಿಳೆಗೆ, 2 ಮಾಜಿ ಸೈನಿಕರಿಗೆ, ಒಂದು ಅಂಗವಿಕಲರಿಗೆ ಮೀಸಲಿರಿಸಲಾಗಿದೆ.
ಆದರೆ, ಸಾಮಾನ್ಯ ವರ್ಗದ ಪುರುಷರು, ಮೀಸಲು ವಂಚಿತ ಇತರ ವರ್ಗದವರು ಸಾಮಾನ್ಯ ವರ್ಗದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಇದಲ್ಲದೆ ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ತೋಟಗಾರಿಕೆ, ಕೃಷಿ, ಅರಣ್ಯ, ಆಡಳಿತ ಸಹಾಯಕ ತಾಂತ್ರಿಕ ಸಹಾಯಕರು, ಗಣಕಯಂತ್ರ ನಿರ್ವಾಹಕ ಹುದ್ದೆಯಲ್ಲಿ ಮೀಸಲು ನೀಡಿಲ್ಲ ಎಂದು ದೂರಿದರು.
ಜಿಪಂ ಸಿಇಒ ಹಾಗೂ ಅಧಿಕಾರಿಗಳು ಮೀಸಲು ವರ್ಗೀಕರಣ ಪರಿಶೀಲನೆ ಮಾಡಬೇಕು. ನಿಯಮ ಪ್ರಕಾರ ಎಲ್ಲ ಹುದ್ದೆಗಳು ರೋಸ್ಟರ್ ಪದ್ಧತಿಯಲ್ಲಿ ನೇಮಕಾತಿ ನಡೆಯಬೇಕು. ನಿರ್ಲಕ್ಷ್ಯ ಮಾಡಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದರು. ಮುಖಂಡರಾದ ಮುದ್ದುರಂಗಪ್ಪ, ಹೊನ್ನಪ್ಪ ವಕೀಲರು, ಮಲ್ಲು ನಿಂಬೇಕಾಯಿ ಇದ್ದರು.