ಬೆಳಗಾವಿ: ಯಾರಿಗಾದರೂ ಗಂಟೆಗಂಟ್ಟಲೆ ಕಾಯುವುದು ಒಮ್ಮೊಮ್ಮೆ ಶಿಕ್ಷೆಯಂತೆ ಭಾಸವಾಗುತ್ತದೆ. ಆದರೆ, ಅಂಥ ಕಾಯುವ ಸಮಯದಲ್ಲಿ ನಮ್ಮಿಷ್ಟದ ಹವ್ಯಾಸ ನೆಚ್ಚಿದರೆ ತಾಳ್ಮೆ ಹೆಚ್ಚುವ ಜತೆಗೆ ಉಲ್ಲಾಸವೂ ಮೂಡುತ್ತದೆ. ಆ ನಿಟ್ಟಿನಲ್ಲಿ ಕಾಯುವವರು ಓದುತ್ತ ಕುಳಿತುಕೊಳ್ಳಲು ಸರ್ಕಾರದ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಕಚೇರಿಗಳಲ್ಲಿ ‘ಗ್ರಂಥಾಲಯ’ ಆರಂಭಿಸುವ ಹೊಸದೊಂದು ಟ್ರೆಂಡ್ ಆರಂಭವಾಗಿದ್ದು, ಕಚೇರಿಗಳು ಜ್ಞಾನಸುಧೆ ಹರಿಸುವ ಕೇಂದ್ರಗಳಾಗುತ್ತಿವೆ.
ಮುದ ನೀಡುವ ಓದುವ ಮೋದ: ಬೆಳಗಾವಿ ನಗರದಲ್ಲಿರುವ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿಗಳ ಆವರಣದಲ್ಲಿ ಕಚೇರಿಗೆ ಬರುವ ಸಂದರ್ಶಕರು, ಸಾರ್ವಜನಿಕರು ಓದುವ ಹವ್ಯಾಸ ಬೆಳಸಿಕೊಳ್ಳಲಿ ಎಂಬ ಉದ್ದೇಶದಿಂದ ಗ್ರಂಥಾಲಯ ಸ್ಥಾಪಿಸಲಾಗಿದೆ. ಅದರ ಬೆನ್ನಲ್ಲೇ ಇದೀಗ ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ಬೃಹತ್ ಗ್ರಂಥಾಲಯ ಆರಂಭಿಸಲಾಗಿದೆ. ಇಲ್ಲಿನ ವೈವಿಧ್ಯಮಯ ಪುಸ್ತಕದ ರಾಶಿ ನಡುವೆ ಜನರು ತಮಗೆ ಇಷ್ಟವಾದ ಪುಸ್ತಕ ಓದುವ ವಾತಾವರಣ ಸೃಷ್ಟಿಸಲಾಗಿದೆ.
ದೂರದ ಊರುಗಳಿಂದ ವಿವಿಧ ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಮಟ್ಟದ ಕಚೇರಿಗೆ ಆಗಮಿಸುತ್ತಿರುವ ಸಾರ್ವಜನಿಕರ ಬೇಸರ ಕಳೆಯಲು, ಓದುವ ಹವ್ಯಾಸ ಬೆಳಸುವ ಉದ್ದೇಶದಿಂದ ಶಿಕ್ಷಣ, ಸಾಹಿತ್ಯ, ಆಧ್ಯಾತ್ಮಿಕ, ರಾಜಕೀಯ, ಧಾರ್ಮಿಕ, ದಿನಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಬೇಕಾದ ಪುಸ್ತಕಗಳನ್ನು ಒಳಗೊಂಡಿರುವ ಮಿನಿ ಗ್ರಂಥಾಲಯಗಳು ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿವೆ. ಕೆಲವರು ಸ್ವಂತ ಹಣದಲ್ಲಿ ಪುಸ್ತಕ ಖರೀದಿಸಿ ಗ್ರಂಥಾಲಯಕ್ಕೆ ತಂದು ಕೊಡುತ್ತಿದ್ದಾರೆ. ಅಲ್ಲದೆ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಗ್ರಂಥಾಲಯಗಳಿಗೆ 200ಕ್ಕೂ ಅಧಿಕ ಪುಸ್ತಕಗಳು ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರಂಥಾಲಯಗಳು ತಾಲೂಕು ಮಟ್ಟದ ಕಚೇರಿಗಳಿಗೂ ವಿಸ್ತರಣೆಯಾಗಬೇಕು. ಏಕೆಂದರೆ, ಹಳ್ಳಿಗಳಿಂದ ಅಧಿಕ ಸಂಖ್ಯೆಯಲ್ಲಿ ಜನರು ತಾಲೂಕು ಮಟ್ಟದ ಕಚೇರಿಗಳಿಗೆ ಆಗಮಿಸುತ್ತಾರೆ. ಕೆಲವೊಮ್ಮೆ ಗಂಟೆಗಟ್ಟಲೇ ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಇದಕ್ಕಾಗಿ ಜನರು ಕಚೇರಿಗಳಲ್ಲಿ ಅಲೆದಾಡುತ್ತಾರೆ. ಗ್ರಂಥಾಲಯ ಆರಂಭಿಸಿದರೆ ಜನರು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತಾರೆ. ಜತೆಗೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಹಾಗಾಗಿ, ಜಿಲ್ಲಾಡಳಿತ ತಾಲೂಕು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ ಆಗ್ರಹಿಸಿದ್ದಾರೆ.
ಜನರಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಆರಂಭಿಸಿರುವ ಗ್ರಂಥಾಲಯಗಳಿಗೆ ಜನರಿಗೆ ಸ್ಪಂದನೆ ಸಿಗುತ್ತಿದೆ. ಆ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯಲ್ಲೂ ಗ್ರಂಥಾಲಯ ಆರಂಭಿಸಲಾಗಿದೆ..| ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ