ಹೂವಿನಹಡಗಲಿ: ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಗಿ ವೀರಭದ್ರೇಶ್ವರ ಸ್ವಾಮಿ ಹಾಗೂ ಕಂಠಿಬಸವೇಶ್ವರ ಸ್ವಾಮಿಯ ಜೋಡಿಪಲ್ಲಕ್ಕಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಸೋಗಿ ಗ್ರಾಮದಿಂದ ಸೋಮವಾರ ಸಂಜೆ ಗ್ರಾಮಕ್ಕೆ ಆಗಮಿಸಿದ ವೀರಭದ್ರೇಶ್ವರ ಸ್ವಾಮಿಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು. ಗ್ರಾಮದ ಕಲ್ಯಾಣಿಯಲ್ಲಿ ಸ್ವಾಮಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜೆ ನೆರವೇರಿಸಿ ಮಳೆ, ಬೆಳೆ ಸಮೃದ್ದಿಯಾಗಲೆಂದು ಪ್ರಾರ್ಥಿಸಿದರು.
ಮಂಗಳವಾರ ಪಂಚಕಳಸ ಹೊತ್ತ ಜೋಡಿಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ಸಾಗಿತು. ವೀರಗಾಸೆ ಕುಣಿತದಲ್ಲಿನ ಸ್ವಾಮಿಯ ಒಡಪುಗಳು ಭಕ್ತರ ಗಮನಸೆಳೆದವು. ಹಳ್ಳಿಕೇರಿ ವೀರೇಶ ಸ್ವಾಮಿಯ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.