ಜಿಲ್ಲೆ

ಮುನವಳ್ಳಿಯಲ್ಲಿ ತೆಪ್ಪೋತ್ಸವ ಸಂಭ್ರಮ

ಪ್ರಶಾಂತ ಹೂಗಾರ

ಮುನವಳ್ಳಿ: ಇಲ್ಲಿನ ಶಿಂದೋಗಿ-ಮುನವಳ್ಳಿಯ ಶ್ರೀ ಕುಮಾರೇಶ್ವರ ಆಲೂರಮಠದ ವತಿಯಿಂದ ಮಲಪ್ರಭಾ ನದಿಯಲ್ಲಿ ಮಕರ ಸಂಕ್ರಮಣದ ನಿಮಿತ್ತ 52 ವರ್ಷದ ಮಹಾತೆಪ್ಪೋತ್ಸವ ಮಂಗಳವಾರ ಸಂಜೆ ಸಂಭ್ರಮ ಹಾಗೂ ಸಡಗರದಿಂದ ಜರುಗಿತು.

ತೆಪ್ಪೋತ್ಸವದ ತೇರಿನಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಸೀನರಾಗಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ, ರಾಮದುರ್ಗದ ಶಾಂತವೀರ ಶ್ರೀ, ಬದಾಮಿಯ ಶಿವಪೂಜಾ ಶಿವಾಚಾರ್ಯರು, ನವಲಗುಂದ ಬಸವಲಿಂಗ ಶ್ರೀ, ಶಿಂದೋಗಿಯ ಈರಯ್ಯಸ್ವಾಮಿ ಹಿರೇಮಠ, ಮಡಿವಾಳಯ್ಯಸ್ವಾಮಿ ಹಿರೇಮಠ ಹಾಗೂ ಶಿಂದೋಗಿ-ಮುನವಳ್ಳಿ ಸಮಸ್ತ ಸದ್ಭಕ್ತರು ಉಪಸ್ಥಿತರಿದ್ದರು.

ನದಿಯ ಇಕ್ಕೆಲಗಳಲ್ಲಿ ಸೇರಿದ ಭಕ್ತರು ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ತೆಪ್ಪಕ್ಕೆ ಅರ್ಪಿಸಿ ಭಕ್ತಿಭಾವ ಮೆರೆದರು. ಕಾರ್ಯಕ್ರಮದ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಲಿಂ. ಸಿದ್ದಬಸವ ಸ್ವಾಮೀಜಿ ಭಾವಚಿತ್ರದ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು.