ಮುದಗಲ್ ಪಟ್ಟಣದ ಕಿಲ್ಲಾದ ಹುಸೇನಿ ಆಲಂ ದರ್ಗಾಕ್ಕೆ ಗುರುವಾರ ಎಸ್ಪಿ ಎಂ.ಪುಟ್ಟಮಾದಯ್ಯ ಭೇಟಿ ನೀಡಿದ್ದರು. ಡಿವೈಎಸ್ಪಿ ದತ್ತಾತ್ರೇಯ, ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ, ಮುದಗಲ್ ಪಿಎಸ್‌ಐ ವೆಂಕಟೇಶ ಮಾಡಗೇರಿ ಇದ್ದರು. 
ಜಿಲ್ಲೆ

ಮುದಗಲ್‌ನಲ್ಲಿ ಮೊಹರಂ ಸಿದ್ಧತೆ ಪರಿಶೀಲಿಸಿದ ಎಸ್ಪಿ

ಮುದಗಲ್: ಜಾತ್ರೆ, ಉರುಸು, ಹಬ್ಬಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಕೂಡ ಅತ್ಯಗತ್ಯ. ಈ ಬಾರಿ ದರ್ಗಾ ಸಮಿತಿಯವರು ಇಲಾಖೆಗೆ ಸಹಕಾರ ನೀಡುವ ಮೂಲಕ ಮೊಹರಂ ಹಬ್ಬ ಅದ್ದೂರಿ ಆಚರಣೆ ಮಾಡಲಿದ್ದಾರೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.

ಪಟ್ಟಣದಲ್ಲಿ ಐತಿಹಾಸಿಕ ಮೊಹರಂ ಸಿದ್ಧತೆ ಪರಿಶೀಲಿಸಿ ಕಿಲ್ಲಾದ ಹುಸೇನಿ ಆಲಂ ದರ್ಗಾಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಲ ಮೊಹರಂ ಹಬ್ಬದಲ್ಲಿ ಹೆಚ್ಚು ಜನ ಸೇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಂದೋಬಸ್ತ್‌ಗಾಗಿ 2 ಕೆಎಸ್‌ಆರ್‌ಪಿ ತುಕಡಿ, ಇಬ್ಬರು ಡಿವೈಎಸ್ಪಿ, ಹತ್ತು ಜನ ಸಿಪಿಐ, 20 ಜನ ಪಿಎಸ್‌ಐ, 34 ಜನ ಎಎಸ್‌ಐ, 84 ಹೆಡ್ ಕಾನ್ಸಟೇಬಲ್, 130 ಪೊಲೀಸ್ ಪೇದೆ, 46 ಮಹಿಳಾ ಪೊಲೀಸ್ ಪೇದೆಗಳು, 112 ಹೋಂಗಾರ್ಡ್ ಸೇರಿದಂತೆ 425 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಐತಿಹಾಸಿಕ ಮುದಗಲ್ ಮೊಹರಂ ಹಬ್ಬಕ್ಕೆ ಅನ್ಯ ಜಿಲ್ಲೆ, ಬೇರೆ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ದರ್ಗಾ ಸಮಿತಿ ಅವರಿಗೂ ಇಲಾಖೆಯ ಕೆಲ ನಿರ್ದೇಶನಗಳನ್ನು ನೀಡಿದ್ದು, ಸಹಕರಿಸುವಂತೆ ಕೋರಲಾಗಿದೆ. ಡ್ರೋನ್ ಕ್ಯಾಮರಾಗಳಿಂದ ಚಿತ್ರೀಕರಣ ಮಾಡಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ ಎಂದು ತಿಳಿಸಿದರು.

ಕಿಲ್ಲಾದ ಹುಸೇನಿ ಆಲಂ ದರ್ಗಾದಲ್ಲಿ ಎಸ್ಪಿ ಅವರನ್ನು ದರ್ಗಾ ಸಮಿತಿ ಸನ್ಮಾನಿಸಿತು. ದರ್ಗಾ ಸಮಿತಿ ಅಧ್ಯಕ್ಷ ಅಮೀರಬೇಗ್ ಉಸ್ತಾದ್, ಕಾರ್ಯದರ್ಶಿ ಸಾದಿಕ್ ಅಲಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರ, ಮುಖಂಡರಾದ ಮಹಾಂತೇಶ ಪಾಟೀಲ್, ಮುಜಾಕೀರ್ ಕಿಲ್ಲಾ, ಪುರಸಭೆ ಸದಸ್ಯ ಎಸ್.ಆರ್. ರಸೂಲ್, ಗಯಾಸುದ್ದೀನ್ ಇತರರಿದ್ದರು.