ಮಸ್ಕಿ ಜಲಾಶಯದ ಗೇಟ್‌ಗಳ ತೆಗೆದು ಹಳ್ಳಕ್ಕೆ ನೀರು ಬಿಟ್ಟಿರುವುದು. 
ಜಿಲ್ಲೆ

ಮಸ್ಕಿ ತಾಲೂಕಿನಲ್ಲಿ 15 ಮನೆಗಳು ಕುಸಿತ

ಮಸ್ಕಿ: ಪಟ್ಟಣ ಸೇರಿ ತಾಲೂಕಿನಲ್ಲಿ ಸತತ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಪಟ್ಟಣದ ಗಾಂಧಿನಗರದಲ್ಲಿ ಹೊಸ ಬಸ್ ನಿಲ್ದಾಣಕ್ಕೆ ನೀರು ನುಗ್ಗಿ ಕೆರೆಯಂತಾಗಿತ್ತು.

ಜೆಸ್ಕಾಂ ಕಚೇರಿಯಲ್ಲಿ ಸಂಗ್ರಹವಾಗುವ ಮಳೆ ನೀರು ನಿಲ್ದಾಣದ ಒಳಗಡೆ ಹರಿದಿದ್ದು, ಚರಂಡಿಗೆ ಹೋಗುತ್ತಿಲ್ಲ. ಇದರಿಂದಾಗಿ ಮಳೆ ನೀರು ನಿಲ್ದಾಣದೊಳಗೆ ಸಂಗ್ರಹಗೊಂಡಿದೆ.

ಮಳೆಗೆ ತಾಲೂಕಿನ ಸೊಂಪುರತಾಂಡಾ, ಮೂಡಲದಿನ್ನಿ, ಸುಲ್ತಾನಪುರ, ಯತಗಲ್, ಸಂಕನಾಳ, ಕುಣಿಕೆಲ್ಲೂರು ಸೇರಿದಂತೆ ವಿವಿಧೆಡೆ 15 ಮನೆಗಳು ಕುಸಿದಿವೆ.

425 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಕಳೆದ 24 ತಾಸಿನಲ್ಲಿ ವಾಡಿಕೆಯಂತೆ 7.9 ಮಿಮೀ ಮಳೆ ಆಗಬೇಕಿತ್ತು. ಆದರೆ, 66.4 ಮಿಮೀ ಮಳೆಯಾಗಿದೆ.

ಮಸ್ಕಿ ಜಲಾಶಯದಿಂದ ನೀರು ಬಿಡುಗಡೆ: ತಾಲೂಕಿನ ಮಾರಲದಿನ್ನಿ ಬಳಿ ಇರುವ ಮಸ್ಕಿ ನಾಲಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಬಿಡಲಾಗಿದೆ.

ಸುತ್ತಲಿನ ಗ್ರಾಮಗಳ ಜನರು ಜಾನುವಾರುಗಳನ್ನು ಹಳ್ಳಕ್ಕೆ ಬಿಡದೆ ಎಚ್ಚರಿಕೆಯಿದ ಇರಬೇಕೆಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದ್ದಾರೆ. 472.12 ಮೀ. ಸಾಮರ್ಥ್ಯದ ಜಲಾಶಯ ಭರ್ತಿಯಾಗಿದೆ. 400 ಕ್ಯೂಸೆಕ ಒಳಹರಿವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 450 ಕ್ಯೂಸೆಕ್ ನೀರನ್ನು ಹಳ್ಳಕ್ಕೆ ಹರಿಸಲಾಗಿದೆ.

ಮಸ್ಕಿ ಪುರಸಭೆ, ಬಳಗಾನೂರು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ, ಜನರನ್ನು ಹಳ್ಳದ ಕಡೆ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ.