ಸಾಂದರ್ಭಿಕ ಚಿತ್ರ 
ಜಿಲ್ಲೆ

ಮಂಗಸೂಳಿಯಲ್ಲಿ ಶ್ರಾವಣ ಸಂಭ್ರಮ

ರಾಘವೇಂದ್ರಗೌಡ ಭೀ ಪಾಟೀಲ್

ಸಂಬರಗಿ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಮಂಗಸೂಳಿ ಗ್ರಾಮದಲ್ಲಿರುವ ಪುರಾತನ ಕಾಲದ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಲ್ಲಿ ಪ್ರತಿದಿನ ಸಂಜೆ ವಿವಿಧ ಸ್ವಾಮೀಜಿಗಳಿಂದ ಪ್ರವಚನ ಜರುಗಲಿದೆ.

5ನೇ ವರ್ಷದ ಪ್ರವಚನ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಜ್ಞಾನ ದಾಸೋಹ, ಆಧ್ಯಾತ್ಮಿಕ ಪ್ರವಚನ, ಅನ್ನದಾಸೋಹ ಕಾರ್ಯಕ್ರಮ ಜರುಗಲಿವೆ. ಶ್ರಾವಣ ತಿಂಗಳಲ್ಲಿ ದಿನನಿತ್ಯ ವಿಶೇಷ ಪೂಜೆ, ಅರ್ಚನೆ ಆಯೋಜಿಸಿದೆ. ತಿಂಗಳ ಕಾಲ ದೇವಸ್ಥಾನವು ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಲಿದೆ.

400 ವರ್ಷದ ಪುರಾತನ ದೇವಸ್ಥಾನ ಇದಾಗಿದೆ. ಸುಮಾರು 2 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಿದೆ. ದೇವಸ್ಥಾನದ ಶಿಖರ ಕಟ್ಟಡ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದ್ದು, ದೇವಸ್ಥಾನ ಆವರಣದಲ್ಲಿ ಹಾಲ್ ಕಟ್ಟಡ ಕೆಲಸವೂ ಪ್ರಗತಿಯಲ್ಲಿದೆ. ದೇವಸ್ಥಾನದ ಹೊರಗಡೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನದ ಮೂರ್ತಿ ನಿರ್ಮಾಣ ಮುಕ್ತಾಯದ ಹಂತದಲ್ಲಿದೆ.

ದೇವಸ್ಥಾನದ ಎದುರಿಗೆ 14 ಅಡಿ ಎತ್ತರದ ಶಂಕರ ಪ್ರತಿಮೆ ಕೆಲಸವೂ ಪ್ರಾರಂಭವಿದೆ. ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಭಕ್ತರಿಂದ ಸಹಾಯಧನ ಬರುತ್ತಿದ್ದು, ಕಟ್ಟಡ ಪೂರ್ಣಗೊಳಿಸದಲು ಆರ್ಥಿಕ ಸಹಾಯ ಅವಶ್ಯವಿದೆ. ಭಕ್ತರು ಸಹಾಯಕ್ಕೆ ಮುಂದಾಗಬೇಕೆಂದು ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಚಿದಾನಂದ ಮಾಳಿ ಮನವಿ ಮಾಡಿದ್ದಾರೆ.

ಕಾಡಾಪುರದ ಸಿದ್ಧಾರೂಢ ಆಶ್ರಮದ ನಾಗಲಿಂಗ ಸ್ವಾಮೀಜಿ, ಮೈಶಾಳದ ಹಿರೇಮಠ ಸಂಸ್ಥಾನದ ಶ್ರೀ 108 ಡಾ.ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕವಲಗುಡ್ಡ-ಹಣಮಾಪುರದ ಕರಿ ಸಿದ್ಧಯೋಗಿ ಆಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಬೆಳ್ಳಂಕಿಯ ಹಿರೇಮಠ ಸಂಸ್ಥಾನದ ಸಿದ್ದೇಶ್ವರ ಮಂದಿರದ 108 ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಲಿಂಗನೂರ ಗಣೇಶ್ವರ ಗೌಳಿಮಠದ ಅವಧೂತ ಧಾಮಾಜಿ ಸ್ವಾಮೀಜಿ, ಕುಸನಾಳದ ಸುಭಾಷ ಶಿವಾಳೆ ಮಹಾರಾಜರಿಂದ ಶ್ರಾವಣ ಮಾಸ ಪರ್ಯಂತ ಪ್ರವಚನ ಜರುಗಲಿದೆ.