ಲಿಂಗಸುಗೂರು: ಪಟ್ಟಣದಲ್ಲಿ ರಸ್ತೆಗಳ ದುರಸ್ತಿ ಹಾಗೂ ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ರವಿ ಸಿರಗುಪ್ಪಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ಪಶು ಸಂಗೋಪನಾ ಇಲಾಖೆ ಕಚೇರಿಯಿಂದ ಬಸವಸಾಗರ ವೃತ್ತದವರೆ ಮತ್ತು ವಿಸಿಬಿ ಕಾಲೇಜು ಮಾರ್ಗದ ಸೇರಿದಂತೆ ಇತರೆ ಪ್ರಮುಖ ರಸ್ತೆಯ ಡಾಂಬರ್ ಕಿತ್ತಿ ಹೋಗಿ ತಗ್ಗು ಗುಂಡಿಗಳು ನಿರ್ಮಾಣಗೊಂಡಿವೆ.
ಬೇಸಿಗೆ ವೇಳೆ ಧೂಳುಮಯ ವಾತಾವರಣ ಮತ್ತು ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಯಂತಾಗುತ್ತಿದೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ವಾಹನ ಸವಾರರು ಆಯ ತಪ್ಪಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲೆ ಆವರಿಸಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.