ಹಂದಿಗುಂದ: ವಕ್ಫ್ ಬೋರ್ಡ್ ನಮ್ಮ ರೈತರು ಹಾಗೂ ಹಿಂದು ದೇವಾಲಯಗಳ ಜಮೀನುಗಳಲ್ಲಿ ವಕ್ಫ್ ಹೆಸರು ನಮೂದಿಸಿ, ಭೂ ಕಬಳಿಕೆ ಮಾಡುತ್ತಿರುವುದು ಖೇದಕರ ಸಂಗತಿ. ಕೂಡಲೇ ಸರ್ಕಾರದ ವಕ್ಫ್ ಬೋರ್ಡ್ ಅಧಿಕಾರ ಹಿಂಪಡೆದು ರೈತರಿಗೆ ಜಮೀನು ಮರಳಿಸಬೇಕೆಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಕಾಳಿಕಾದೇವಿ ದೇವಸ್ಥಾನಗಳ ಲೋಕಾರ್ಪಣೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಗದಲ್ಲಿ ಎಲ್ಲೆಡೆ ದೇವರಿದ್ದಾನೆ. ವಿಶ್ವದಲ್ಲೇ ಭಾರತ ಅತಿ ಹೆಚ್ಚು ದೇವಾಲಯ ಹೊಂದಿದ ದೇಶವಾಗಿದೆ. ಗುರುಪರಂಪರೆ ಹಾಗೂ ವಿರಕ್ತ ಪರಂಪರೆ ಸಮಾಜದ ಎರಡು ಕಣ್ಣುಗಳು. ಭಕ್ತರ ಉದ್ಧಾರವೇ ಉಭಯ ಪರಂಪರೆಯ ಮೂಲ ಧ್ಯೇಯವಾಗಿದೆ ಎಂದು ತಿಳಿಸಿದರು.
ಳೀಯ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ, ಜಮಖಂಡಿ ಮುತ್ತಿನ ಕಂತಿ ಹಿರೇಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯರು, ದೋಡವಾಡ ಹಿರೇಮಠ ಜಡಿಸಿದ್ದೇಶ್ವರ ಶಿವಾಚಾರ್ಯರು, ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ವೇ.ಮೂ ಗುರುಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು. ಉಪನ್ಯಾಸಕ ಶಿವಲಿಂಗ ಸಿದ್ನಾಳ ಸ್ವಾಗತಿಸಿದರು. ಸತೀಶ ಬಂದಿ ನಿರೂಪಿಸಿ, ವಂದಿಸಿದರು.