ದೇವದುರ್ಗ ತಾಲೂಕು ಮಲದಕಲ್ ಗ್ರಾಪಂ ವ್ಯಾಪ್ತಿಯ ಎನ್.ಗಣೇಕಲ್‌ಗೆ ಪೊರೈಕೆ ಮಾಡುತ್ತಿದ್ದ ಕಲುಷಿತ ನೀರನ್ನು ತೆರವು ಮಾಡುತ್ತಿರುವುದು. 
ಜಿಲ್ಲೆ

ಕೆರೆಯಲ್ಲಿದ್ದ ಹಳೆ ಕಲುಷಿತ ನೀರು ತೆರವು

Gangavati - Desk - Veeresh S Ullagaddi

ದೇವದುರ್ಗ: ತಾಲೂಕಿನ ಮಲದಕಲ್ ಗ್ರಾಪಂ ವ್ಯಾಪ್ತಿಯ ಎನ್.ಗಣೇಕಲ್ ಗ್ರಾಮದಲ್ಲಿ ತಲೆದೂರಿದ್ದ ಕಲುಷಿತ ಕುಡಿವ ನೀರಿನ ಸಮಸ್ಯೆಗೆ ಸ್ಥಳೀಯ ಗ್ರಾಪಂ ಪರಿಹಾರ ಕಲ್ಪಿಸಿದೆ. ಕೆರೆಯಲ್ಲಿದ್ದ ಹಳೆ ಕಲುಷಿತ ನೀರನ್ನು ತೆರವು ಮಾಡಿ ಹೊಸ ನೀರು ಹರಿಸಲಾಗಿದೆ.


ಹಲವು ದಿನಗಳಿಂದ ಕುಡಿಯಲು ಕೆರೆಗೆ ತುಂಬಿಸಿದ್ದ ನೀರು ಕಲುಷಿತಗೊಂಡು ಪಾಚುಗಟ್ಟಿತ್ತು. ಅದೇ ನೀರನ್ನು ಗ್ರಾಮಕ್ಕೆ ಕುಡಿಯಲು ಸರಬರಾಜು ಮಾಡಲಾಗುತ್ತಿತ್ತು, ಗ್ರಾಮಸ್ಥರು ಈ ನೀರು ಬಳಕೆಗೆ ಹಿಂದೇಟು ಹಾಕಿದ್ದರು. ಕೆರೆಯ ಕಲುಷಿತ ನೀರು ಖಾಲಿ ಮಾಡಿಸಿ ಶುದ್ಧ ಕುಡಿವ ನೀರು ಪೊರೈಸುವಂತೆ ಗ್ರಾಮಸ್ಥರು ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಗ್ರಾಪಂ ಕೆರೆಯಲ್ಲಿದ್ದ ಕಲುಷಿತ ನೀರನ್ನು ನಾಲ್ಕು ಪಂಪ್‌ಸೆಟ್ ಮೂಲಕ ಇತ್ತೀಚಿಗೆ ಖಾಲಿ ಮಾಡಿಸಿದೆ. ಕೆರೆಗೆ ಕಾಲುವೆ ಮೂಲಕ ಹೊಸ ನೀರು ಶೇಖರಿಸಿ ಶುದ್ಧೀಕರಿಸಿ ಗ್ರಾಮಕ್ಕೆ ಪೂರೈಸಲಾಗುತ್ತಿದೆ. ಕೆರೆಯ ಸುತ್ತ ತಂತಿಯ ಬೇಲಿಯ ರಕ್ಷಣೆ ಒಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.