ಮದ್ದೂರು: ಕಬ್ಬು ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಸಮರ್ಪಕ ಬರ ಪರಿಹಾರ ಹಾಗೂ ಬೆಳೆ ನಷ್ಟ ಪರಿಹಾರ ಒದಗಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕಿನ ಕೊಪ್ಪದಲ್ಲಿ ಮದ್ದೂರು-ನಾಗಮಂಗಲ ಮಾರ್ಗದಲ್ಲಿ ವಾಹನಗಳ ಸಂಚಾರ ತಡೆದು ಸೋಮವಾರ ಪ್ರತಿಭಟನೆ ಮಾಡಲಾಯಿತು.
ಸಮರ್ಪಕವಾದ ಬರ ಪರಿಹಾರ ಹಾಗೂ ಬೆಳೆನಷ್ಟ ಪರಿಹಾರ ಕೊಡದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಕಬ್ಬು ಅಗ್ರಮಾನ್ಯ ಸ್ಥಾನ ಪಡೆದುಕೊಂಡಿದೆ. ಅದಕ್ಕಾಗಿಯೇ ಮಂಡ್ಯ ಜಿಲ್ಲೆಯನ್ನು ಸಕ್ಕರೆ ನಾಡು ಎಂದು ಕರೆಯಲಾಗುತ್ತದೆ. ಪ್ರಸ್ತುತ ಮಂಡ್ಯ ಜಿಲ್ಲೆಗೆ ಭೀಕರ ಬರಗಾಲ ಬಂದೊದಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ತಾವು ಬೆಳೆದ ಬೆಳೆಗಳಿಂದ ನಷ್ಟ ಉಂಟಾಗಿ ಸಂಕಷ್ಟದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇತಂಹ ಪರಿಸ್ಥಿತಿಯಲ್ಲಿ ಸರ್ಕಾರ ತೋಟಗಾರಿಕೆ ಬೆಳೆಗಳು ಮತ್ತು ಕಬ್ಬಿನ ಬೆಳೆಗೆ ಬರ ಮತ್ತು ಬೆಳೆ ನಷ್ಟ ಪರಿಹಾರ ನೀಡಲು ಮೀನಮೇಷ ಎಣಿಸಿ ಕೆಲವು ಬೆಳೆಗಳಿಗೆ ಮಾತ್ರ ಪರಿಹಾರ ನೀಡುವುದಾಗಿ ಘೋಷಿಸುವ ಮೂಲಕ ಸರ್ಕಾರದ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರಧಾನವಾದ ಕಬ್ಬಿನ ಬೆಳೆ ಗದ್ದೆಗಳಲ್ಲಿ ಒಣಗಿ ಬೆಂಡಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ. ವ್ಯರ್ಥವಾಗಿದೆ. ತೋಟಗಾರಿಕೆ ಬೆಳೆಗಾದ ತೆಂಗು, ಅಡಕೆ, ಬಾಳೆ, ಸೀಬೆ, ಮಾವು ಸೇರಿದಂತೆ ಇತರ ಬೆಳೆಗಳು ರೈತನ ಕೈಗೆ ಸೇರದೆ ಸಂಕಷ್ಟ ಉಂಟು ಮಾಡಿವೆ. ಸರ್ಕಾರ ಭತ್ತ, ರಾಗಿ, ಮೆಕ್ಕೆಜೋಳ ಬೆಳೆಗಳಿಗೆ ಮಾತ್ರ ಪರಿಹಾರ ನೀಡಲು ಹೊರಟಿರುವುದು ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ಪರಿಸ್ಥಿತಿ ಉಂಟಾಗಿದೆ ಎಂದರು.
ರೈತ ಮುಖಂಡ ಸೊ.ಶಿ.ಪ್ರಕಾಶ್ ಮಾತನಾಡಿ, ಸರ್ಕಾರ ಕಬ್ಬು ಸೇರಿದಂತೆ ನಷ್ಟವಾಗಿರುವ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿರುವ ರೈತರಿಗೂ ಇನ್ನೂ ಪರಿಹಾರ ಬಂದಿಲ್ಲ. ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆಯ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ವಿಮೆ ನಂಬಿಕೊಂಡಿರುವ ರೈತರ ಬದುಕು ಬರಡಾಗಿದೆ. ಸರ್ಕಾರ ತಕ್ಷಣ ಫಸಲ್ ಭಿಮಾ ಯೋಜನೆಯ ವಿಮೆ ಹಣವನ್ನು ರೈತರಿಗೆ ಕೋಡಿಸಬೇಕು. ಬೆಳೆ ಬೆಳೆಯುವ ಸಲುವಾಗಿ ಕೃಷಿ ಇಲಾಖೆಯ ನಿರ್ದೇಶನದಂತೆ ಕೊಳವೆಬಾವಿಗಳನ್ನು ಕೊರೆಸಿದ್ದು, ಆ ರೈತರಿಗೆ ಕೃಷಿ ಇಲಾಖೆಯಿಂದ 50 ಸಾವಿರ ರೂ. ಸಹಾಯಧನ ಮಂಜೂರಾಗಿಲ್ಲ. ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣ ಕೊಳವೆಬಾವಿ ಸಹಾಯಧನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಂದಾಯ ನಿರೀಕ್ಷಕ ಮಹೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ರೈತ ಮುಖಂಡರಾದ ಅಣ್ಣೂರು ಮಹೇಂದ್ರ, ಸೊ.ಶಿ.ಪ್ರಕಾಶ್, ನವೀನ್, ಕುಮಾರ್, ಜಗದೀಶ್, ಪುಟ್ಟಸ್ವಾಮಿ, ರಾಮೇಗೌಡ, ಉಮೇಶ್, ನಿಂಗೇಗೌಡ, ಶ್ರೀನಿವಾಸ್, ಶಿವರಾಮು, ಶಿವಮೂರ್ತಿ, ಕುಮಾರ್, ತಿಮ್ಮೇಶ್, ಶಿವನಂಜೇಗೌಡ, ರಾಮಣ್ಣ, ರಾಮಕೃಷ್ಣ ಸೇರಿದಂತೆ ಇತರರು ಇದ್ದರು.