ಹೂವಿನಹಡಗಲಿ ತಾಲೂಕಿನ ಹಿರೇಬನ್ನಿಮಟ್ಟಿ ಗ್ರಾಮದಲ್ಲಿ ಭಾನುವಾರ ಗ್ರಾಮಸ್ಥರು ಎರಡು ತೆಪ್ಪಗಳನ್ನು ಹಗ್ಗದಿಂದ ಕಟ್ಟಿಹಾಕಿರುವುದು. 
ಜಿಲ್ಲೆ

ಹಿರೇಬನ್ನಿಮಟ್ಟಿಯಲ್ಲಿ ಅಕ್ರಮ ಮರಳುಗಾರಿಕೆ

ರುದ್ರಪ್ಪ ವಾಲಿ

ಹೂವಿನಹಡಗಲಿ: ತುಂಗಭದ್ರಾ ನದಿಯಲ್ಲಿ ನಿತ್ಯ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಅನೇಕ ವರ್ಷಗಳಿಂದಲೂ ನಡೆಯುತ್ತಿರುವ ದಂಧೆಗೆ ಕಡಿವಾಣ ಬಿದ್ದಿಲ್ಲ. ತಾಲೂಕಿಗೆ ಹೊಂದಿಕೊಂಡು ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದಂತೆ ಅಕ್ರಮ ಮರಳುಗಾರಿಗೆ ದಂಧೆ ನಡೆಯುತ್ತದೆ.

ತಾಲೂಕಿನ ಹರವಿ, ಲಿಂಗನಾಯಕನಹಳ್ಳಿ, ಕುರುವತ್ತಿ, ಮೈಲಾರ, ಅಂಗೂರು, ಹಿರೇಬನ್ನಿಮಟ್ಟಿ, ಹೊಸಹಳ್ಳಿ, ನಂದಿಗಾವಿ, ಮಾಗಳ, ರಾಜವಾಳ, ನವಲಿ, ಕೊಂಬಳಿ, ಪುರ, ಕಂದಗಲ್ಲು, ಸೋವೆನಹಳ್ಳಿ, ಹಕ್ಕಂಡಿ ಭಾಗಗಳಲ್ಲಿ ನಿತ್ಯ ನೂರಾರು ಟ್ಯ್ರಾಕ್ಟರ್‌ಗಳಲ್ಲಿ ಮರಳು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತದೆ.

ಈ ಎಲ್ಲಾ ಗ್ರಾಮಗಳಲ್ಲಿ ರಾತ್ರಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಾಣದಂತೆ ಕುಳಿತಿದ್ದಾರೆ.

ಹಿರೇಬನ್ನಿಮಟ್ಟಿ ಗ್ರಾಮದಲ್ಲಿ ಅನ್ಯಜಿಲ್ಲೆಗಳ ಮರಳು ದಂಧೆಕೋರರು ಹಗಲಿನಲ್ಲಿ ತೆಪ್ಪಗಳ ಮೂಲಕ ನದಿಯಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ನದಿಯ ಮರಳನ್ನು ಭಾನುವಾರ ನೂರಾರು ತೆಪ್ಪಗಳ ಮೂಲಕ ಸಾಗಿಸುವ ಸಂದರ್ಭದಲ್ಲಿ ಹಿರೇಬನ್ನಿಮಟ್ಟಿ ಗ್ರಾಮಸ್ಥರು ದಂಧೆಕೋರರ ಮೇಲೆ ದಾಳಿಮಾಡಿದ್ದಾರೆ. ಈ ಸಂದರ್ಭದಲ್ಲಿ ಎರಡು ತೆಪ್ಪಗಳನ್ನು ಹಿಡಿದು ಹಾಕಿದ್ದಾರೆ.

ಗ್ರಾಮಸ್ಥರು ಹಾಗೂ ದಂಧೆಕೋರ ನಡುವೆ ಮಾತಿನ ಚಕಮಕಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರುತ್ತಿದಂತೆ ದಂಧೆಕೋರರು ಪರಾರಿಯಾಗಿದ್ದಾರೆ. ಪರಿಸ್ಥಿತಿ ತಿಳಿಗೊಂಡ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

 ಗ್ರಾಮಸ್ಥರ ಆರೋಪ

ಅನೇಕ ವರ್ಷದಿಂದಲೂ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ನಾವು ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸೇರಿ ಗಣಿಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ. ಅನೇಕ ವರ್ಷಗಳಿಂದ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ಕೆಲ ಇಲಾಖೆಗಳ ಸಿಬ್ಬಂದಿಗಳೇ ಅಕ್ರಮ ಮರಳುಗಾರಿಕೆ ಮಾಡುವವರಿಗೆ ಬೆಂಬಲವಾಗಿದ್ದಾರೆ. ಅದಕ್ಕಾಗಿ ನಾವೇ ಇಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದೇವೆ ಎಂದು ಹಿರೇಬನ್ನಿಮಟ್ಟಿ ಗ್ರಾಮಸ್ಥರು ತಿಳಿಸಿದರು.