ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆ (ಎಂಜಿಎನ್ವೈ)ಯ 2ನೇ ಹಂತ 200 ಕೋಟಿ ರೂ. ಅನುದಾನದಲ್ಲಿ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಜರುಗಿಸುವ ಅಧಿಕಾರವನ್ನು ಪೌರಾಡಳಿತ ನಿರ್ದೇಶನಾಲಯ (ಡಿಎಂಎ)ಕ್ಕೆ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಇದನ್ನು ಪಾಲಿಕೆಯ ಅಧಿಕಾರ ಮೊಟಕುಗೊಳಿಸುವ ಹುನ್ನಾರ ಎಂದು ಅಸಮಾಧಾನ ಹೊರ ಹಾಕಿದರು.
ಸೋಮವಾರ ಜರುಗಿದ ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮೂಲಕ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ತಿಪ್ಪಣ್ಣ ಮಜ್ಜಗಿ, ಎಂಜಿಎನ್ವೈ 1ನೇ ಹಂತದ ಅನುದಾನದಲ್ಲಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಪಾಲಿಕೆಯೇ ಜರುಗಿಸಿತ್ತು. ಇದೀಗ ಸರ್ಕಾರದ ಹೊಸ ಸುತ್ತೋಲೆ ಪ್ರಕಾರ 2ನೇ ಹಂತದ ಅನುದಾನದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಡಿಎಂಎ ನಡೆಸಲಿದೆ. ಇದು ಆಕ್ಷೇಪಾರ್ಹ ಎಂದರು.
ಈ ಯೋಜನೆಯಡಿ ಟೆಂಡರ್ ಪ್ರಕ್ರಿಯೆಯನ್ನು ಡಿಎಂಎ ಮಟ್ಟದಲ್ಲಿ ಕೈಗೊಳ್ಳಬೇಕೆಂದು ಸರ್ಕಾರದ ಹೊಸ ಸುತ್ತೋಲೆಯಲ್ಲಿದೆ ಎಂದು ಪಾಲಿಕೆ ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ ಸಭೆಗೆ ತಿಳಿಸಿದರು.
ಒಟ್ಟು ಮೊತ್ತದಲ್ಲಿ ಶೇ. 7.5ರಷ್ಟು ಹಣವನ್ನು ಸ್ಥಳೀಯ ಸಂಪನ್ಮೂಲದಿಂದ ಕೊಡಬೇಕು. ಶೇ. 7.5 ರಷ್ಟು ಸಾಲದ ಹೊಣೆಗಾರಿಕೆ ಪಾಲಿಕೆ ಮೇಲಿದೆ. ಹೀಗಿರುವಾಗ ಟೆಂಡರ್ ಪ್ರಕ್ರಿಯೆಯನ್ನು ಮೊಟಕುಗೊಳಿಸಿ (ಪಾಲಿಕೆಯಿಂದ) ಡಿಎಂಎ ಗೆ ನೀಡಿರುವುದು ಸರಿಯಲ್ಲ ಎಂದು ಮಜ್ಜಗಿ ವಾದಿಸಿದರು.
ಸಭಾನಾಯಕ ವೀರಣ್ಣ ಸವಡಿ ಮಾತನಾಡಿ, ಡಿಎಂಎ ಟೆಂಡರ್ ಪ್ರಕ್ರಿಯೆ ಜರುಗಿಸುವುದಕ್ಕೆ ನಮ್ಮ ವಿರೋಧವಿದೆ. ಪಕ್ಷಾತೀತವಾಗಿ ನಾವೆಲ್ಲರೂ ವಿರೋಧಿಸಬೇಕಿದೆ ಎಂದರು.
ಎಂಜಿಎನ್ವೈ ಅನುದಾನದಡಿ ಟೆಂಡರ್ ಕರೆಯುವ ಅಧಿಕಾರ ಪಾಲಿಕೆಗೆ ಇರಬೇಕು. ಡಿಎಂಎ ಗೆ ನೀಡುವ ಮೂಲಕ ಪಾಲಿಕೆಯ ಅಧಿಕಾರ ಮೊಟಕುಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯೋಣ ಎಂದು ಮೇಯರ್ ರಾಮಪ್ಪ ಬಡಿಗೇರ ರೂಲಿಂಗ್ ನೀಡಿದರು.
ಕಾಂಗ್ರೆಸ್ ಸದಸ್ಯರ ಸಭಾತ್ಯಾಗ
ಪೆಂಡಾರಗಲ್ಲಿಯ ಮಸೀದಿ ಮರು ನಿರ್ವಣಕ್ಕೆ ಕೋರಿರುವ ಪರವಾನಗಿ ವಿಷಯವನ್ನು ಇಂದಿನ ಸಭೆಯ ಹೆಚ್ಚುವರಿ ವಿಷಯ ಪಟ್ಟಿಯಲ್ಲಿ ಸೇರಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಈ ಕುರಿತು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದವು. ಮಸೀದಿ ಮರು ನಿರ್ವಣಕ್ಕೆ ಕೋರಿರುವ ಪರವಾನಗಿ ಕುರಿತು ಪಾಲಿಕೆಯ ಸ್ಥಾಯಿ ಸಮಿತಿ ಕಾನೂನು ಕೋಶದ ಅಭಿಪ್ರಾಯ ಕೇಳಿತ್ತು. ಕಾನೂನು ಕೋಶದ ಅಭಿಪ್ರಾಯ ಪುನಃ ಸ್ಥಾಯಿ ಸಮಿತಿ ಮುಂದೆ ಬಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಂಡನೆಯಾಗಬೇಕು. ಈಗ ಸ್ಥಾಯಿ ಸಮಿತಿ ಅವಧಿ ಮುಗಿದಿದೆ. ಮುಂದಿನ ಸಭೆಗೆ ಮಂಡನೆ ಮಾಡಿ ಚರ್ಚೆ ನಡೆಸೋಣ ಎಂದು ಸಭಾನಾಯಕ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ ವಾದಿಸಿದರು.
ಈ ವಿಷಯವನ್ನು ಇಂದಿನ ಸಭೆಯ ಹೆಚ್ಚುವರಿ ವಿಷಯ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ನೀವು ಹೇಳಿದ್ದೀರಿ. ಯಾಕೆ ತಂದಿಲ್ಲ ? ಎಂದು ಕಾಂಗ್ರೆಸ್ ಸದಸ್ಯ ಮೊಹಮ್ಮದ್ ಆರೀಫ್ ಭದ್ರಾಪುರ ಪಾಲಿಕೆ ಆಯುಕ್ತರ ಬಳಿ ತೆರಳಿ ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಸ್ಥಾಯಿ ಸಮಿತಿ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಹಲವು ವಿಷಯಗಳನ್ನು ಹೆಚ್ಚುವರಿ ವಿಷಯ ಪಟ್ಟಿಯಲ್ಲಿ ತರಲಾಗಿದೆ. ಮಸೀದಿ ಮರು ನಿರ್ವಣಕ್ಕೆ ಕೋರಿರುವ ಪರವಾನಗಿ ವಿಷಯ ಚರ್ಚೆಗೆ ಕೈಗೆತ್ತಿಕೊಳ್ಳದಿದ್ದರೆ ಇಂದಿನ ಸಭೆಯ ಯಾವುದೇ ಹೆಚ್ಚುವರಿ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬಾರದು ಎದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದರು.
ಇದಕ್ಕೆ ಆಡಳಿತ ಪಕ್ಷದವರು ಒಪ್ಪದಿದ್ದಾಗ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಬಳಿಕ ವಿಷಯ ಪಟ್ಟಿಯಲ್ಲಿನ ಬಹುತೇಕ ಎಲ್ಲವೂ ಚರ್ಚೆಯಾಗದೇ ಅನುಮೋದನೆ ಪಡೆದುಕೊಂಡವು.