ಹುಬ್ಬಳ್ಳಿ: ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿರುವ ಧಾರವಾಡ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬವು ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಮೂರು ದಿನಗಳವರೆಗೆ ನಡೆಯುವ ಪ್ರದರ್ಶನದಲ್ಲಿ ತರಹೇವಾರಿ ಹಣ್ಣು, ಹೂ, ಸಸಿಗಳು, ಗಡ್ಡೆ ಗೆಣಸು, ತರಕಾರಿ, ಮೀನುಗಳು, ಸಿರಿಧಾನ್ಯಗಳ ಮಹತ್ವ ತಿಳಿಯುವ ಜತೆಗೆ ಅವುಗಳ ವಿಶೇಷತೆ ವೀಕ್ಷಣೆ ಮಾಡಬಹುದಾಗಿದೆ.
ಪ್ರಜಾಸತ್ತೆ, ಸಮಾನತೆ ಹಾಗೂ ಸಂವಿಧಾನದ ಜಾಗೃತಿ ಮೂಡಿಸುವ ಬುದ್ಧ, ಬಸವ, ಅಂಬೇಡ್ಕರ್ ಅವರ ಸಿರಿಧಾನ್ಯದ ಆಕರ್ಷಕ ಮೂರ್ತಿಗಳು ಗಾಜಿನ ಮನೆ ಪ್ರವೇಶ ದ್ವಾರದಲ್ಲಿ ನೋಡುಗರನ್ನು ಸೆಳೆಯುತ್ತವೆ. ಮುಂದೆ ಹೋದಂತೆ ವೈವಿಧ್ಯಮಯ ಹೂಗಳ ಲೋಕ ತೆರೆದುಕೊಳ್ಳುತ್ತದೆ.
ತೋಟಗಾರಿಕೆ ಹಾಗೂ ಕೃಷಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಮೀನುಗಾರಿಕೆ ಇಲಾಖೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಹಾಪ್ ಕಾಮ್ಸ್, ಸ್ವರ್ಣ ಟೆಕ್ನೋ ಕನ್ ಸ್ಟ್ರಕ್ಶನ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಉದ್ಘಾಟಿಸಿದರು.
ಉತ್ತಮ ಸ್ಪಂದನೆ:
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಲಾಡ್, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಅತ್ಯುತ್ತಮವಾಗಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದಾರೆ. ಜನರು ಕೂಡ ಉತ್ಸಾಹದಿಂದ ಪಾಲ್ಗೊಂಡು ವೀಸುತ್ತಿದ್ದಾರೆ. ಇನ್ನೂ ಎರಡು ದಿನ ಇದ್ದು ಹೆಚ್ಚಿನ ಜನ ಭೇಟಿ ನೀಡಬೇಕು ಎಂದು ಹೇಳಿದರು.
ಸಿರಿಧಾನ್ಯ ಹಬ್ಬ ಹಾಗೂ ಪ್ರದರ್ಶನದಲ್ಲಿ ರೈತ ಮುಖಂಡರು, ಸಾರ್ವಜನಿಕರು ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿದ್ದಾರೆ. ಹೊಸ ತಳಿಯ ಹಣ್ಣು ಹೂಗಳನ್ನು ಬೆಳೆಸಲು ಅನೇಕ ಜನರು ಆಸಕ್ತಿ ತೋರುತ್ತಿದ್ದಾರೆ. ಇಂತಹ ಉತ್ಸವದಲ್ಲಿ ಯುವ ಜನರು ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಔಷಧಿ ಸಸಿಗಳನ್ನು ಸಹ ಪ್ರದರ್ಶನದಲ್ಲಿ ಇಡಲಾಗಿದೆ. ವೈದ್ಯಕಿಯ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಆಗಮಿಸುತ್ತಿದ್ದಾರೆ. ಹುಬ್ಬಳ್ಳಿಯ ಸಂಜೀವಿನಿ ಆಯುರ್ವೇದ ಕಾಲೇಜು ಸೇರಿ ಅನೇಕ ಮಹಾವಿದ್ಯಾಲಯಗಳ ವಿದ್ಯಾಥಿರ್ಗಳು ಭಾಗವಹಿಸಿರುವುದು ಸಂತೋಷದ ಸಂಗತಿ ಎಂದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಯೋಗೇಶ ಮಾತನಾಡಿ, ಎಲ್ಲ ಇಲಾಖೆಗಳ ಸಹಯೋಗದಲ್ಲಿ ಉತ್ತಮ ಪ್ರದರ್ಶನ ಏರ್ಪಡಿಸಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ, ಕೆಎಂಸಿಆರ್ಐ, ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು, ಜೆಎಸ್ಎಸ್ ಕಾಲೇಜು ಸೇರಿ ಜಿಲ್ಲೆಯ 78 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ಬೆಳೆಯುವ ಕೆಂಪು ಮೆಣಸಿನಕಾಯಿ ಮೂಲಕ ಆಕರ್ಷಕ ಪಕ್ಷಿ ರಚನೆ ಮಾಡಲಾಗಿದೆ. ಹೂವಿನಲ್ಲಿ ನಿರ್ಮಿಸಿದ ಗೋವಿನ ಕಲಾಕೃತಿ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ನವೆಂಬರ್ 18ರಂದು ಫಲಪುಷ್ಪ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ಉಪ ಕೃಷಿ ನಿರ್ದೇಶಕರಾದ ಆರ್.ಜಿ. ಸಂದೀಪ್, ಜಯಶ್ರೀ ಹಿರೇಮಠ, ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ, ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.